ಮೈಸೂರು: ಅತ್ತ ಕಡೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯೆ ಶಕ್ತಿ ಎಂದು ಬಿ ಎಲ್ ಸಂತೋಷ್ ಹೇಳಿದ್ರೆ ಇದೇ ಹೊತ್ತಿನಲ್ಲಿ ಪ್ರಿಯಾಂಕ ಖರ್ಗೆ ಮತ್ತೊಂದು ಹೊಸ ಬಾಂಬ್ ಹಾಕಿದ್ದಾರೆ. ಬಿಟ್ ಕಾಯಿನ್ ತನಿಖೆ ಚುರುಕುಗೊಂಡರೆ ಖಂಡಿತ ರಾಜ್ಯಕ್ಕೆ ಮೂರನೇ ಸಿಎಂ ಬರ್ತಾರೆ ಎಂಬ ಹೇಳಿಕೆ ನೀಡಿ ಶಾಕ್ ನೀಡಿದ್ದಾರೆ.
ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕುಣಿಯಲಾರದೆ ನೆಲ ಡೊಂಕು ಎನ್ನುತ್ತಿದ್ದಾರೆ. ಆರಗ ಜ್ಞಾನೇಂದ್ರಗೆ ಆಡಳಿತ ನಡೆಸಲು ಆಗುತ್ತಿಲ್ಲ. ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು. ಗೃಹಸಚಿವರಿಗೆ ಕೇಶವ ಕೃಪಾದಿಂದ ಆದೇಶ ಬರುತ್ತಿದೆ. ಬಿಟ್ ಕಾಯಿನ್ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿಯಾಗಲಿದ್ದಾರೆ.
ಪಿಎಸ್ಐ ಪ್ರಕರಣದಲ್ಲಿ ಅರೆಸ್ಟ್ ಆಗಿರುವವರು ಕಿಂಗ್ ಪಿನ್ ಗಳಲ್ಲಿ. ಅವರು ಮಧ್ಯವರ್ತಿಗಳಷ್ಟೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆ ತನಿಖೆಯಾಗಬೇಕು. ಮೋದಿ ಜೊತೆ ಫೋಟೋ ಇದೆ ಅಂತ ತನಿಖೆ ನಿಲ್ಲಿಸುತ್ತೀರಾ..? ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೆ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಿ, ನನಗೆ ಯಾವ ನೋಟೀಸ್ ನೀಡಲಾಗಿದೆ ಎಂದು ಮೊದಲು ತಿಳಿಯಲಿ. ಸಂಸದ ಪ್ರತಾಪ್ ಸಿಂಹಗೆ ಕಾನೂನಿನ ಅರಿವಿಲ್ಲ. ನೋಟೀಸ್ ಗೆ ಕಾನೂನು ಪ್ರಕಾರವೇ ನಡೆದುಕೊಂಡಿದ್ದೇನೆ. ಪ್ರತಾಪ್ ಸಿಂಹ ಮೊದಲು ಅವರ ಕೆಲಸ ಸರಿಯಾಗಿ ಮಾಡಲಿ. ಅವರ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.