ಸುದ್ದಿಒನ್, ಚಿತ್ರದುರ್ಗ, (ಜೂ.16) : ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ (Anti Conversion Bill )ರದ್ದು, ಎಪಿಎಂಪಿ ತಿದ್ದುಪಡಿ ಕಾಯ್ದೆ ವಾಪಸಾತಿ, ಪಠ್ಯಪರಿಷ್ಕರಣೆಗೆ ಸಮ್ಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಚಿತ್ರದುರ್ಗದಲ್ಲಿಯೂ ಸಹಾ ವಿಶ್ವ ಹಿಂದೂ ಪರಿಷದ್ (vishwa hindu parishad) ಸಿಡಿದೆದಿದ್ದು ಇದನ್ನು ತೀವ್ರವಾಗಿ ಖಂಡಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಸರ್ಕಾರವು ಬಲವಂತ ಮತಾಂತರ ಕಾಯ್ದೆಯ ನಿಷೇಧವನ್ನು ಹಿಂಪಡೆಯಲು ನಿರ್ಧರಿಸುವುದನ್ನು ವಿರೋಧಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಭಾರತವು ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮಿಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲೂ ಸಹ ಹಿಂದೂಗಳೊಡನೆ ಅನ್ಯಧರ್ಮಿಯರೂ ಸಹ ತಮ್ಮ ಧರ್ಮ ಮತಾಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದೂಗಳಿಗೆ ಅಮಿಷ ತೋರಿಸಿ ಅಥವ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವ ಮರಳು ಮಾಡಿ ಮತಾಂತರಿಸುವುದನ್ನು ನಾವು ಖಂಡಿಸುತ್ತೇವೆ. ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಕರ್ನಾಟಕವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ.
ಕಾಂಗ್ರೆಸ್ ಸರ್ಕಾರವು ಅನ್ಯ ಧರ್ಮಿಯರಲ್ಲದೆ ಅತಿ ಸಂಖ್ಯೆಯಲ್ಲಿ ಹಿಂದೂಗಳೂ ಸಹಮತ ಹಾಕಿದ್ದು, ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಲ್ಲ. ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದುಗಳು ಇದನ್ನು ಖಂಡಿಸುವುದರೊಂದಿಗೆ ಮಂತ್ರಿಮಂಡಲವು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ.
ಈ ಹಿಂದಿನ ಸರ್ಕಾರವು ಶಾಲಾ ಪಠ್ಯದಲ್ಲಿ ರಾಷ್ಟ್ರಪುರುಷರ ಪರಿಚಯವನ್ನು ಸೇರಿಸಿದ್ದನ್ನೂ ಸಹ ಸಂಕುಚಿತ ಭಾವನೆಯಿಂದ ಮತ್ತು ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಸಲುವಾಗಿ ಸಾವರ್ಕರ್‍ರವರಂತಹ ಅಪ್ರತಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸುವುದನ್ನೂ ಸಹ ನಾವು ಖಂಡಿಸುತ್ತೇವೆ. ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನೀಡಲೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿ ರುದ್ರೇಶ್, ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಪ್ರಭಂಜನ್ ದಕ್ಷಿಣ ಪ್ರಾಂತ ಸಹ ಸಂಯೋಜಕರು ಬಜರಂಗದಳ, ಓಂಕಾರ್ ದಕ್ಷಿಣ ಪ್ರಾಂತ ಧರ್ಮಚಾರ್ಯ ಪ್ರಮುಖ ವಿಶ್ವ ಹಿಂದೂ ಪರಿಷದ್, ಕೇಶವ್ ಸಹ ಸಂಯೋಜಕರು ಬಜರಂಗದಳ, ಶ್ರೀನಿವಾಸ್ ನಗರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ರಂಗನಾಥ್ ನಗರ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತದ್, ಶಶಿಧರ್, ಗ್ರಾಮಾಂತರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ಶ್ರೀನಿವಾಸ್ ( ಡೈರಿ) ಗ್ರಾಮಾಂತರ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಪ್ರಮುಖರಾದ ಶಕ್ತಿ ,ತೇಜು, ರಾಮು ರೇಣು , ಕಿಶೋರ್ , ವಿಜಯಣ್ಣ, ದಿನೇಶ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.