ಹಾಸನ: ಹಾಸನಾಂಬೆಯ ದೇಗುಲದ ಬಾಗಿಲು ತೆರೆದಿದ್ದು,ಭಕ್ತರಿಗೆ ತಾಯಿ ದರ್ಶನ ನೀಡುತ್ತಿದ್ದಾಳೆ. ಹೀಗಾಗಿ ಎಲ್ಲರೂ ತಾಯಿಯ ದರ್ಶನಕ್ಕೆ ಸಾಲುಗಟ್ಟಿ ಹೋಗ್ತಾ ಇದ್ದಾರೆ. ರೇವಣ್ಣ ಅವರ ಕುಟುಂಬಸ್ಥರು ಕೂಡ ಇಂದು ಹಾಸನಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ರೇವಣ್ಣ ಹಾಗೂ ಭವಾನಿ ರೇವಣ್ಣ ಇಬ್ಬರು ತಾಯಿಯ ದರ್ಶನಕ್ಕೆ ಹೋಗಿದ್ದರು. ಮಗನ ಬಗ್ಗೆ ತಾಯಿ ಭವಾನಿ ಬೇಡಿಕೊಂಡಿದ್ದಾರೆ.
ಜೈಲಿನಲ್ಲಿರುವ ಮಗ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಆತನ ಒಳಿತಿಗಾಗಿ ಬೇಡಿಕೊಂಡಿದ್ದಾರೆ. ಬಳಿಕ ಮಾತನಾಡಿದ ಭವಾನಿ ರೇವಣ್ಣ, ನಾನು ಮತ್ತು ನಮ್ಮ ಯಜಮಾನರು ತಾಯಿಯ ದರ್ಶನ ಪಡೆದಿದ್ದೇವೆ. ಮನೆಯವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ. ದೇವೇಗೌಡ ಅವರ ಆರೋಗ್ಯ ಚೆನ್ನಾಗಿರಬೇಕು ಅಂತ ಬೇಡಿಕೊಂಡಿದ್ದೇವೆ. ಇವತ್ತು ಡಿಸ್ಚಾರ್ಜ್ ಆಗ್ತಾ ಇದ್ದಾರೆ. ಹುಷಾರಾಗಿದ್ದಾರೆ ಎಂದಿದ್ದಾರೆ. ದೇವೇಗೌಡ ಅವರು ಇನ್ಫೆಕ್ಷನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ವೃದ್ದಿಗಾಗಿ ಭವಾನಿ ರೇವಣ್ಣ ಅವರು ಕೂಡ ಪ್ರಾರ್ಥನೆ ಮಾಡಿದ್ದಾರೆ.
ಉಳಿದಂತೆ ಮಗನಿಗಾಗಿ ಹೆಚ್ಚು ಪ್ರಾರ್ಥನೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ಕೋರ್ಟ್ ನಿಂದಾನೇ ಜೀವಾವಧಿ ಶಿಕ್ಷೆಯಾಗಿದೆ. ಜಾಮೀನಿನ ಮೇಲೆ ಹೊರ ಬರಬಹುದು ಎಂಬ ನಿರೀಕ್ಷೆ ಸಾಮಾನ್ಯವಾಗಿಯೇ ಎಲ್ಲರಿಗೂ ಇತ್ತು. ಯಾಕಂದ್ರೆ ಮನೆ ಕೆಲಸದಾಕೆಯ ಜೊತೆಗೆ ಕೆಟ್ಟದಾಗಿ ನಡೆದುಕೊಂಡ ಆರೋಪದ ಮೇಲೆ ರೇವಣ್ಣ ಕೂಡ ಜೈಲು ಸೇರಿದ್ದರು. ಅವರಿಗೆ ಜಾಮೀನು ಸಿಕ್ಕಿತ್ತು. ಹಾಗೇ ಸೂರಜ್ ರೇವಣ್ಣನಿಗೂ ಜಾಮೀನು ಸಿಕ್ಕ ಹಿನ್ನೆಲೆ ಪ್ರಜ್ವಲ್ ಗೂ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಭವಾನಿ ರೇವಣ್ಣ, ಹಾಸನಾಂಬೆಯ ಬಳಿ ಬೇಡಿಕೊಂಡಿದ್ದಾರೆ.
