ಚಿತ್ರದುರ್ಗ, (ಮೇ.31) : ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಬಿಎಸ್ ಪಿ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ಆಯೋಗದ ವರದಿಯ ಪ್ರಕಾರ ವಿದ್ಯೆಯಲ್ಲಿ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇಕಡ 15% ರಿಂದ 17% ಮತ್ತು ಪರಿಶಿಷ್ಟ ಪಂಗಡವರಿಗೆ 3% ರಿಂದ 7.5% ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಈ ವರದಿಯನ್ನು ಜಾರಿಗೆ ತರಲು ಮೀನಾಮೇಷ ಏಣಿಸುತ್ತುದೆ ಎಂದು ದೂರಿದರು.
ಪರಿಶಿಷ್ಟ ವರ್ಗದ ಜನರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈದೀಗ ನೀಡಿರುವ ಮೀಸಲಾತಿ ಪ್ರಮಾಣ ಬಹಳ ಕಡಿಮೆ ಇದೆ. ಇದನ್ನು ಶೇಕಡ 7.5% ಹೆಚ್ಚಿಸಬೇಕು ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ರಾಜನಹಳ್ಳಿಯಿಂದ ಬೆಂಗಳೂರಿಗೆ ಸುಮಾರು 400 ಕಿ.ಮೀ ಪಾದಯಾತ್ರೆ ನಡೆಸಿ, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಗೊಂಡು 111 ದಿನಗಳು ಕಳೆದರು ಮೀಸಲಾತಿ ಹೆಚ್ಚಿಸದೆ ಸಮಾಜಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಶ್ರೀಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಸುಭಾಷ್ ಆಡಿ ನೇತೃತ್ವದ ಉಪಸಮಿತಿಯನ್ನು ಪರಿಶೀಲನೆಗಾಗಿ ನೇಮಿಸಿ ಕಾಲವಿಳಂಭ ಮಾಡಲಾಗುತ್ತಿದ್ದಾರೆ ಎಂದು ಹೇಳಿದ ಅವರು, ಶೀಘ್ರವೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್‌ದಾಸ್‌ರವರ ಏಕಸದಸ್ಯ ಆಯೋಗದ ವರದಿ ಜಾರಿ ಮಾಡಬೇಕು ಎಂದು ಕಳೆದ ಮಾರ್ಚಿ 3 ರಂದು ವಿಧಾನಸಭೆಯಲ್ಲಿಯೂ ಕೂಡ ಚರ್ಚೆಯಾಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರೂ ಸೇರಿದಂತೆ ಪಕ್ಷ ಬೇಧ ಮರೆತು ಒತ್ತಾಯಿಸಲಾಗಿದೆ. ಆದ್ದರಿಂದ ಕೂಡಲೇ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ಆಯೋಗದ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ವೆಂಕಟೇಶ್, ನರೇನಹಳ್ಳಿ ಅರುಣಕುಮಾರ್ ಸೇರಿದಂತೆ ಇತರರು ಹಾಜರಿದ್ದರು.