ಉಡುಪಿ: ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ನಿಷೇಧ ಹೇರಲಾಗಿದೆ. ಇದು ಈಗ ಎಲ್ಲೆಡೆ ವ್ಯಾಪಿಸಿದೆ. ಕೇವಲ ಮಾರಿಗುಡಿ ದೇವಸ್ಥಾನದಲ್ಲಿ ಮಾತ್ರ ಅಲ್ಲ ರಾಜ್ಯದ ಹಲವೆಡೆ ನಡೆಯುವ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳನ್ನ ನಿಷೇಧ ಮಾಡಲಾಗಿದೆ. ಹಿಜಾಬ್ ವಿಚಾರ ಉಡುಪಿಯಲ್ಲಿ ಶುರುವಾಗಿ ಹೇಗೆ ರಾಜ್ಯವ್ಯಾಪಿ ಪಸರಿಸಿತ್ತೋ ಇದು ಹಾಗೆಯೇ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಮಂಗಳೂರು ಮಾತ್ರವಲ್ಲ ಮಲೆನಾಡಿನ ಭಾಗದಲ್ಲೂ ಈ ರೀತಿಯ ಘಟನೆಗಳು ಕಾಣಿಸುತ್ತಿವೆ. ಭಜರಂಗದಳದ ವ್ಯಾಪಾರಸ್ಥರು ಟೆಂಡರ್ ತೆಗೆದುಕೊಂಡು, ನಮಗೆ ಬೇಕಾದ ವ್ಯಾಪಾರಿಗಳಿಗೆ ಅವಕಾಶ ನೀಡುತ್ತೇವೆಂದು ಹೇಳಿದ್ದಾರೆ. ಇದೀಗ ಪುತ್ತೂರು ಜಾತ್ರೆಯಲ್ಲೂ ನಿಷೇಧ ಹೇರಲಾಗಿದೆ. ದಕ್ಷಿಣ ಕನ್ನಡದ ಪುತ್ತೂರು ಮಹಾಲಿಂಗೇಶ್ವರ ದೇಗುಲ ಜಾತ್ರೆಯಲ್ಲೂ ನಿಷೇಧ ಹೇರಲಾಗಿದೆ. ಈ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಯಾಕಲು ಅನುಮತಿ ಸಿಕ್ಕಿದೆ. ಹರಾಜು ಪ್ರಕ್ರಿಯೆಯಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ.
ಇನ್ನು ಇಂದಿನಿಂದ ಆರಂಭವಾಗಿರುವ ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಇಲ್ಲಿಯೂ ಮುಸ್ಲಿಂ ಸಮುದಾಯದ ವ್ಯಾಪಾರಿಗಳನ್ನ ನಿಷೇಧ ಮಾಡಿದ್ದಾರೆ. ಹಿಂದೂಗಳು ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ. ಮೂರ್ತಿ ಪೂಜೆ ಮಾಡುವವರಿಗೆ ಮಾತ್ರ ಈ ಬಾರಿ ಮಾರಿಕಾಂಬಾ ಜಾತ್ರೆಯಲ್ಲಿ ಅವಕಾಶ ನೀಡಲಾಗಿದೆ. ಭಕ್ತಿಯಿಂದ ಹಣ್ಣು ಕಾಯಿ ಮಾರಬೇಕು. ಮುಸ್ಲಿಂ ಅವರು ಮೂರ್ತಿ ಪೂಜೆ ಮಾಡಲ್ಲ. ಹೀಗಾಗಿ ಅವರು ವ್ಯಾಪಾರ ಯಾಕೆ ಮಾಡಬೇಕು. ಮೂರ್ತಿ ಪೂಜೆ ಮಾಡದವರಿಂದ ಪೂಜಾ ಸಾಮಾಗ್ರಿ ತಗೊಂಡು ಪೂಜೆ ಸಲ್ಲಿಸಲಾಗುತ್ತಾ. ಹೀಗಾಗಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಭಜರಂಗದಳದ ಮುಖಂಡ ದೀನ್ ದಯಾಳ್ ಹೇಳಿದ್ದಾರೆ.
ಇನ್ನು ಈ ನಿರ್ಬಂಧ ವಿಚಾರ ಬೆಂಗಳೂರಿಗೂ ಆವರಿಸಿದೆ. ನೆಲಮಂಗಲದ ಜಾತ್ರೆಯಲ್ಲೂ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡಲು ನಿರ್ಬಂಧ ಹೇರಲಾಗಿದೆ.