ತಾಯಿ ಭಾಷೆಯನ್ನು ಗೌರವಿಸಿ : ಡಾ. ದೊಡ್ಡಮಲ್ಲಯ್ಯ

2 Min Read

ಸುದ್ದಿಒನ್, ಹಿರಿಯೂರು, ಮಾರ್ಚ್. 24 : ತಾಯಿ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಡಾ. ದೊಡ್ಡಮಲ್ಲಯ್ಯ ಹೇಳಿದರು.

ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಗಡಾರಿ ಕೃಷ್ಣಪ್ಪ ಮಗಳ ಮದುವೆ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯದ ಮೂಲ ಬೇರು ಕಾವ್ಯ. ಕಾವ್ಯಗಳು ಪ್ರಸ್ತುತ ಸಾಮಾಜಿಕ ಆರ್ಥಿಕ ಧಾರ್ಮಿಕ ಹಾಗು ರಾಜಕೀಯ ವಿದ್ಯಮಾನಗಳಿಗೆ ಸ್ಪಂದನೆ ನೀಡಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಕಾವ್ಯ, ನಾಟಕ, ಕಾದಂಬರಿ, ಕಥೆಗಳು ರಚನೆ ಆಗಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ಡಿ. ಧರಣೇಂದ್ರಯ್ಯ ಮಾತನಾಡಿ ಸಮಾಜದಲ್ಲಿ ಸಮಾಜ ಸುಧಾರಕ ತತ್ವಜ್ಞಾನಿ, ದಾರ್ಶನಿಕರಂತೆ, ಕವಿಯ ಹೆಸರು, ಸೂರ್ಯ, ಚಂದ್ರ ಇರುವವರೆಗೂ ಇರುತ್ತದೆ. ಅನುಭವ, ಪರಿಪಕ್ವತೆಯಿಂದ ಹುಟ್ಟಿದ ಕಾವ್ಯ, ದೇಶ ಹಾಗೂ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತದೆ. ಸಮಾಜವನ್ನು ಉನ್ನತ ಮಟ್ಟಕ್ಕೆ ತರುವ ಜವಾಬ್ದಾರಿ ಕವಿಗೆ ಮಾತ್ರ ಇದ್ದು, ಇದನ್ನು ಸಕಾರಗೊಳಿಸಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಜಿ.ರಂಗಸ್ವಾಮಿ ಮಾತನಾಡಿ, ಈ ಸಮಕಾಲೀನ ದಿನಗಳಲ್ಲಿ ಕವಿಗಳಿಗೆ ಬದ್ಧತೆ, ಪ್ರಾಮಾಣೀಕತೆ ಹಾಗು ಸಾಮಾಜಿಕ ಹೊಣೆಗಾರಿಕೆ ಅಗತ್ಯವಾಗಿದೆ. ಕಥೆ, ಕವನ, ಕಾದಂಬರಿ, ನಾಟಕ, ನೋವುಗಳಿಗೆ ಸಂಕಟಗಳಿಗೆ ಸ್ಪಂದನೆ ನೀಡಬೇಕು. ಜಾಗತಿಕ ಬದಲಾವಣೆಗೆ ತಕ್ಕಂತೆ ಮೂಢನಂಬಿಕೆ, ಕಂದಾಚಾರ, ಜಾತಿ, ಧರ್ಮಗಳಿಗೆ ಅಂಟಿ ಕೊಳ್ಳದೆ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡುವ ಕಾವ್ಯಗಳನ್ನು ರಚನೆ ಮಾಡಬೇಕು ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ಬಬ್ಬೂರು ತಿಪ್ಪೀರನಾಯಕ, ನಿರ್ಮಲ ಮರಡಿಹಳ್ಳಿ, ಬಿ.ಅರ್. ವೇದಮೂರ್ತಿ, ರಾಜು ಸೂಲೇನಹಳ್ಳಿ, ಚಿತ್ರಲಿಂಗಪ್ಪ ಪಿಲ್ಲಹಳ್ಳಿ, ಟಿ.ಶಿವರುದ್ರಪ್ಪ, ಇಂಗಳದಾಳ್ ತಿಮ್ಮಯ್ಯ, ಕೆ.ಹೆಚ್.ಜಯಪ್ರಕಾಶ್, ಬಿ.ಮುರುಳೀಧರ, ಎಂ.ಟಿ.ರವಿರಾಜು, ಭಾಗ್ಯ, ಕಲ್ಯಾಣಕುಮಾರ್, ನರಸಿಂಹಮೂರ್ತಿ, ಹಾಗೂ ಇತರರು ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಕಾದಂಬರಿಕಾರ ಡಿ.ಸಿ.ಪಾಣಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಗಡಾರಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಗಡಾರಿ ಕೆ.ಕೃಷ್ಣಪ್ಪ, ನಾಣ್ಯ ಸಂಗ್ರಹಕಾರ ಹನುಮಂತರಾಯ, ನಿರ್ಮಲ, ರಂಗಮ್ಮ ಇತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *