ಸುದ್ದಿಒನ್ : ಬಿಹಾರದಲ್ಲಿ ರಾಜಕೀಯ ಬದಲಾವಣೆಗಳು ಶರ ವೇಗದಲ್ಲಿ ಬದಲಾಗುತ್ತಿವೆ. ರಾಜ್ಯದ ಮುಖ್ಯಮಂತ್ರಿ ಮತ್ತು ಜನತಾದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಭಾನುವಾರ ಬೆಳಗ್ಗೆ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಅವರು ಪಾಟ್ನಾದ ರಾಜಭವನ ತಲುಪಿದರು. ಮಹಾಘಟಬಂಧನ್ ಜೊತೆಗಿನ ಮೈತ್ರಿಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಮತ್ತೊಂದೆಡೆ, ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸಂಜೆ 4 ಗಂಟೆಗೆ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ ಅವರು 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಜತೆಗಿನ ಮೈತ್ರಿ ಕಡಿದುಕೊಂಡು ಬಿಜೆಪಿ ಜತೆ ಕೈಜೋಡಿಸಲು ಸಿಎಂ ನಿತೀಶ್ ಸಿದ್ಧರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಬಿಜೆಪಿ ಪಕ್ಷದ ಸಹಭಾಗಿತ್ವದಲ್ಲಿ ಮತ್ತೆ ಹೊಸ ಸರ್ಕಾರ ರಚಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಭಾನುವಾರ ಬೆಳಗ್ಗೆ ಪಾಟ್ನಾದ ತಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ಜೆಡಿಯು ಶಾಸಕರೊಂದಿಗೆ ಸಭೆ ನಡೆಸಿದ ನಿತೀಶ್ ಕುಮಾರ್ ಅವರು ರಾಜ್ಯಪಾಲರ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿದರು.
ಮತ್ತೊಂದೆಡೆ, ರಾಜ್ಯ ಬಿಜೆಪಿ ಶಾಸಕರು ಪಾಟ್ನಾದ ತಮ್ಮ ಪಕ್ಷದ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ. ಆದರೆ, ಬಿಜೆಪಿ ಶಾಸಕ ಮೋತಿಲಾಲ್ ಪ್ರಸಾದ್ ಈ ವಿಚಾರವಾಗಿ ಪ್ರಮುಖ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ಜೊತೆ ಸರ್ಕಾರ ರಚಿಸುವ ಬಗ್ಗೆ ಪಕ್ಷದ ವರಿಷ್ಠರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮೋತಿಲಾಲ್ ಹೇಳಿದ್ದಾರೆ.
ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಜೆಡಿಯು ನಾಯಕ ನೀರಜ್ ಕುಮಾರ್ ಕೂಡ ಈ ವಿಷಯದ ಬಗ್ಗೆ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಪಾದಯಾತ್ರೆಗೆ ಹೋದಲ್ಲೆಲ್ಲಾ ಅಡೆತಡೆಗಳು ಎದುರಾಗುತ್ತಿದ್ದು, ತಂತ್ರಗಳ ವೈಫಲ್ಯದ ಬಗ್ಗೆ ಪರಾಮರ್ಶೆ ನಡೆಸುವಂತೆ ಸೂಚಿಸಲಾಗಿದೆ. ಮಿತ್ರಪಕ್ಷಗಳು ಏಕೆ ದೂರ ಸರಿಯುತ್ತಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.