ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಇಂದು ಸಿಲಿಕಾನ್ ಸಿಟಿಯಲ್ಲಿ ರೈತರ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ರೈತ ಸಂಘಟನೆಯ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಈ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಪತ್ರ ಸಲ್ಲಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಐದು ಸಾವಿರಕ್ಕೂ ಅಧಿಕ ರೈತರು ಭಾಗಿಯಾಗಲಿದ್ದಾರೆ.
ಅಷ್ಟಕ್ಕೂ ಸರ್ಕಾರದ ಮುಂದೆ ರೈತರು ಇಡುತ್ತಿರುವ ಬೇಡಿಕೆಗಳೇನು ಎಂಬುದನ್ನು ನೋಡುವುದಾದರೆ, ತೆಲಂಗಾಣದಂತೆ ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡುವ ಯೋಜನೆ ಜಾರಿ ಮಾಡಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸಿ, ಕಾವೇರಿ ಅಚ್ಚುಕಟ್ಟು ರೈತರಿಗೆ ವಂಚೆನಯಾಗಿದೆ. ಆ ರೈತರಿಗೆ ಸರ್ಕಾರದಿಂದ ಎಕರೆಗೆ ಕನಿಷ್ಠ 25 ಸಾವಿರ ಹಣ ನೀಡಬೇಕಾಗಿದೆ.
ಕಬ್ಬು ಕಟಾವು ಸಾಗಾಣಿಕೆ ದರವನ್ನು ಕಾರ್ಖಾನೆಗಳು ಮನಬಂದಂತೆ ಕಡಿಮೆ ಮಾಡಿದ್ದಾರೆ. ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಾಸ್ ಕೊಡಿಸಬೇಕು. ಟನ್ ಕಬ್ಬಿಗೆ 150 ರೂಪಾಯಿ ಹೆಚ್ಚುವರಿ ದರ ಕಾರ್ಖಾನೆಗಳು ರೈತರಿಗೆ ನೀಡಬೇಕು. ಇಲ್ಲವಾದಲ್ಲಿ ಸರ್ಕಾರವೇ ರೈತರಿಗೆ ಹೆಚ್ಚಿನ ಹಣ ನೀಡಬೇಕು. ರೈತರು ಬೆಳೆದ ಸಿರಿಧಾನ್ಯಗಳ ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ, ಹೆಚ್ಚುವರಿ ಬೆಲೆಯನ್ನು ನಿಗದಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.