ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ 5,000 ಕೋಟಿ ರೂ. ಮೀಸಲಿಗೆ ಉಪಮುಖ್ಯಮಂತ್ರಿಗೆ ಮನವಿ

3 Min Read

ಚಿತ್ರದುರ್ಗ. ಫೆ. 18: ಭದ್ರಾ ಮೇಲ್ದಂಡೆ ಯೋಜನೆಗೆ 2026-27ನೇ ಸಾಲಿನ ಆಯವ್ಯಯದಲ್ಲಿ ₹5,000 ಕೋಟಿ ಅನುದಾನ ಮೀಸಲಿಡಬೇಕು ಹಾಗೂ ಗೋನೂರು ಅಕ್ವಾಡೆಕ್ಟ್ ವರೆಗೆ ಭದ್ರಾ ನೀರು ಹರಿಸುವ ಸಲುವಾಗಿ ಬಾಕಿ ಕಾಮಗಾರಿಗಾಗಿ ಶೀಘ್ರವೇ 300 ಕೋಟಿ ರೂ. ಅನುದಾನ ಒದಗಿಸುವಂತೆ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬುಧವಾರದಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

 

ಭದ್ರಾ ಮೇಲ್ದಂಡೆ ಯೋಜನೆಯು ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.  ಅಚ್ಚುಕಟ್ಟು ಪ್ರದೇಶದ ಸುಮಾರು 367 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇ.50 ರಷ್ಟು ನೀರು ತುಂಬಿಸುವುದು ಮತ್ತು ವಾಣಿ ವಿಲಾಸ ಸಾಗರಕ್ಕೆ 2.00 ಟಿ.ಎಂ.ಸಿ ನೀರು ಹರಿಸುವುದು ಯೋಜನೆಯ ಭಾಗವಾಗಿದೆ.  ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಸುಧಾರಿಸಲಿದೆ ಎಂದು ಸಚಿವರು ವಿನಂತಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕøತ ಅಂದಾಜು ಮೊತ್ತವು 21,167.93 ಕೋಟಿ ರೂ. ಗಳಾಗಿದ್ದು, ಇಲ್ಲಿಯವರೆಗೆ ಸುಮಾರು 11,409.55 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನೂ ಸುಮಾರು 10,000 ಕೋಟಿ ರೂ. ಗಳ ಅನುದಾನದ ಅವಶ್ಯಕತೆಯಿದೆ.   ಮಧ್ಯ ಕರ್ನಾಟಕದ ರೈತರು ಕಳೆದ ಐದು ದಶಕಗಳಿಂದ ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದಾರೆ.  ಈ ಯೋಜನೆಯಿಂದ ಕೃಷಿ ಇಳುವರಿ 3 ರಿಂದ 4 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.   ಇತ್ತೀಚೆಗೆ ಜಿಲ್ಲಾ ವ್ಯಾಪ್ತಿಯ ಮತ್ತು ಎಲ್ಲ ತಾಲ್ಲೂಕಿನ ರೈತ ಸಂಘಟನೆಗಳು ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ.  ರೈತ ಸಂಘಟನೆಗಳ ಪ್ರತಿಭಟನೆ ಮತ್ತು ಜನರ ಅಳಲನ್ನು ಪರಿಗಣಿಸಿ, ಬರುವ ಬಜೆಟ್‍ನಲ್ಲಿ ಆದ್ಯತೆ ಮೇರೆಗೆ 5,000 ಕೋಟಿ ರೂ. ಹಂಚಿಕೆ ಮಾಡುವಂತೆ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರಾದ ಟಿ. ರಘುಮೂರ್ತಿ ಬಿ.ಜಿ. ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ ಅವರು ಉಪಮುಖ್ಯಮಂತ್ರಿಗಳಿಗೆ ಕೋರಿದ್ದಾರೆ.

 

ತುರ್ತಾಗಿ 300 ಕೋಟಿ ರೂ. ಬಿಡುಗಡೆ ಮಾಡಿ : ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರುಗಳಲ್ಲಿ 2,25,515 ಹೆಕ್ಟೇರ್ (5,57,022 ಎಕರೆ) ಭೂಮಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆಯಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಇದರಲ್ಲಿ 29.90 ಟಿಎಂಸಿ ನೀರು ಬಳಕೆಯಾಗುತ್ತದೆ ಮತ್ತು ಅದೇ ಜಿಲ್ಲೆಗಳಲ್ಲಿರುವ 367 ಕೆರೆಗಳನ್ನು ಅವುಗಳ ಸಾಮಥ್ರ್ಯದ ಶೇ. 50 ರಷ್ಟು ತುಂಬಿಸಲಾಗುತ್ತದೆ.
ಈ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯು ಸುಮಾರು 152 ಕೆರೆಗಳನ್ನು ತುಂಬಿಸಲಿದ್ದು, ಸೂಕ್ಷ್ಮ ನೀರಾವರಿ ವ್ಯವಸ್ಥೆಯಡಿಯಲ್ಲಿ 3.00 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲಿದೆ. ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದ ಭೂ ಸಮಸ್ಯೆಯು ಸುಮಾರು 4 ವರ್ಷಗಳಿಂದ ಬಾಕಿ ಉಳಿದಿತ್ತು. ಕಳೆದ ಮಾರ್ಚ್‍ನಲ್ಲಿ ಉಪಮುಖ್ಯಮಂತ್ರಿಗಳು ಅಬ್ಬಿನಹೊಳೆ ಗ್ರಾಮಕ್ಕೆ ಭೇಟಿ ನೀಡಿ, ರೈತರಿಗೆ ಭೂ ಪರಿಹಾರದ ಬಗ್ಗೆ ಭರವಸೆ ನೀಡಿ, ವಿಧಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸಿದ ನಂತರ ಲೋಕ ಅದಾಲತ್ ಮೂಲಕ ಪರಿಹಾರ ದೊರಕಿದ್ದು, ಅಬ್ಬಿನಹೊಳೆ ಗ್ರಾಮದಲ್ಲಿ ಕಾಲುವೆ ನಿರ್ಮಾಣ ಕಾರ್ಯ ಆರಂಭವಾಗಿದೆ.

ಪ್ರಸ್ತುತ, ಚಿತ್ರದುರ್ಗ ಶಾಖಾ ಕಾಲುವೆಯ ವೈ-ಜಂಕ್ಷನ್‍ನ ಚೈನೇಜ್: 0.00 ಕಿಮೀ ನಿಂದ ಚೈನೇಜ್: 114.00 ಕಿಮೀ ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ವಿಶ್ವೇಶ್ವರಯ್ಯ ಜಲ ನಿಗಮವು ಫೆಬ್ರವರಿ-2026 ರ ಅಂತ್ಯದ ವೇಳೆಗೆ ಚಿತ್ರದುರ್ಗ ಬಳಿಯ ಗೋನೂರು ಅಕ್ವೆಡಕ್ಟ್‍ಗೆ ಚೈನೇಜ್: 114.00 ಕಿಮೀ ವರೆಗೆ ಪ್ರಾಯೋಗಿಕವಾಗಿ ನೀರನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ, ಕಳೆದ ಜ. 04 ರಂದು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ನಿರ್ಮಾಣ ಕಾರ್ಯವನ್ನು ಪರಿಶೀಲಿಸಲಾಗಿದೆ.  ಚಿತ್ರದುರ್ಗ ಬಳಿಯ ಗೋನೂರು ಅಕ್ವೆಡಕ್ಟ್ ವರೆಗೆ ಫೆಬ್ರವರಿ-2026 ರ ಅಂತ್ಯದ ವೇಳೆಗೆ ಚೈನೇಜ್: 114.00 ಕಿ.ಮೀ. ವರೆಗೆ ನೀರು ಬಿಡುಗಡೆ ಮಾಡಿದರೆ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಈ ಶಾಖಾ ಕಾಲುವೆಯ ಅಡಿಯಲ್ಲಿ ಬರುವ ಸುಮಾರು 90 ಕೆರೆಗಳಿಗೆ ನೀರು ಹರಿಸಬಹುದಾಗಿದೆ.

ಬಾಕಿ ಇರುವ ಕಾಮಗಾರಿ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಕಾರಣಗಳಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಹರಿಸಲು ತುರ್ತಾಗಿ 300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರಾದ ಟಿ. ರಘುಮೂರ್ತಿ ಬಿ.ಜಿ. ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ ಅವರು ಸಹಿ ಮಾಡಿರುವ ಪತ್ರವನ್ನು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಸಲ್ಲಿಸಿ ಮನವಿ ಮಾಡಿದ್ದಾರೆ.
=======

Share This Article
Enable Notifications OK No thanks