ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮಾ.06): ಬಾಕಿಯಿರುವ ಗೌರವಧನ ಪಿಂಚಣಿಯನ್ನು ಕೂಡಲೆ ಬಿಡುಗಡೆಗೊಳಿಸಿ ಪ್ರತಿ ತಿಂಗಳು ಸಕಾಲಕ್ಕೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಿತರಕ್ಷಣಾ ವೇದಿಕೆ, ಭ್ರಷ್ಟಾಚಾರ ಸೇನೆಯ ಉಪ ಸಮಿತಿ ಮತ್ತು ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಯೋಧರ ಮತ್ತು ಉತ್ತರಾಧಿಕಾರಿಗಳ ಸಂಘದ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ಈಗ ವಯೋವೃದ್ದರಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಠದಲ್ಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ನಾಗಭೂಷಣ್ಗೆ ಪಿಂಚಣಿ ನೀಡಲು ವಿಳಂಭ ಮಾಡಿದ್ದಕ್ಕೆ ರಾಜ್ಯ ಉಚ್ಚನ್ಯಾಯಾಲಯ ಸಂಬಂಧಪಟ್ಟವರಿಗೆ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ.
ಈಗಲಾದರೂ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಕಾಲಕ್ಕೆ ಪಿಂಚಣಿ ನೀಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗೌರವಧನ ಹತ್ತು ಸಾವಿರ ರೂ.ಗಳನ್ನು ಮೂವತ್ತು ಸಾವಿರ ರೂ.ಗಳಿಗೆ ಏರಿಸಬೇಕು. ಉಚಿತವಾಗಿ ವೈದ್ಯಕೀಯ ಸೌಲಭ್ಯ ನೀಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಒಂದು ಸರ್ಕಾರಿ ನೌಕರಿ ಸಿಗಬೇಕು. ಕುಟುಂಬದಲ್ಲಿ ಒಬ್ಬರಿಗೆ ಎಲ್ಲಾ ಪ್ರಾಧಿಕಾರಗಳಲ್ಲಿ ನಾಮನಿರ್ದೇಶನಗೊಳಿಸಬೇಕು. ವಸತಿರಹಿತರಿಗೆ ನಿವೇಶನ ಮನೆ ಹಾಗೂ ಜಮೀನು ಇಲ್ಲದವರಿಗೆ ಭೂಮಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಿತ ರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಓ.ನರಸಿಂಹಮೂರ್ತಿ, ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಯೋಧರು ಮತ್ತು ಉತ್ತರಾಧಿಕಾರಿಗಳ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಗುರುರಾಜೇಂದ್ರ, ಟಿ.ಚಂದ್ರಶೇಖರ್, ಶಿವುಯಾದವ್, ಸಿ.ಎನ್.ಗೌರಮ್ಮ ವೀರಣ್ಣ, ಎನ್.ಪರಮೇಶ್ವರಪ್ಪ, ಉಮಾಶಂಕರಸ್ವಾಮಿ, ನ್ಯಾಯವಾದಿ ದಿಲೀಪ್, ಎನ್.ಭೀಮಪ್ಪ, ಚಂದ್ರಮ್ಮ, ಜಯಮ್ಮ, ಪುಟ್ಟಮ್ಮ, ಲಕ್ಷ್ಮಿದೇವಿ, ಕೆ.ಓಬಣ್ಣ, ಶ್ರೀನಿವಾಸರೆಡ್ಡಿ, ಕೆ.ಟಿ.ಲಕ್ಷ್ಮಿಕಾಂತ, ರವೀಂದ್ರರೆಡ್ಡಿ, ವಿನೋದ, ಅಚ್ಚಮ್ಮ, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಶಾಖೆ ಗೌರವಾಧ್ಯಕ್ಷ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ, ಅಧ್ಯಕ್ಷ ಗಣೇಶ್, ನ್ಯಾಯವಾದಿ ಪ್ರತಾಪ್ಜೋಗಿ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.