Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜನವರಿ 26 ರಂದು ದೆಹಲಿಯಲ್ಲಿ ಅನಾವರಣಗೊಳ್ಳಲಿದೆ ಗಣರಾಜ್ಯೋತ್ಸವ ಸ್ತಬ್ಧಚಿತ್ರ ‘ನಾರಿ ಶಕ್ತಿ’

Facebook
Twitter
Telegram
WhatsApp

ಚಿತ್ರದುರ್ಗ(ಜ.24) : ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಸ್ತಬ್ಧಚಿತ್ರವು ಜ. 26 ರಂದು ರಾಜಧಾನಿಯ ಕರ್ತವ್ಯ ಪಥದಲ್ಲಿ (ರಾಜ್‍ಪಥ್) ಸಾಗುವುದರೊಂದಿಗೆ ಕರ್ನಾಟಕ ಹಿರಿಮೆಯ ಕೀರ್ತಿ ಪತಾಕೆಯನ್ನು ಹಾರಿಸಲಿದೆ.

ಇದರೊಂದಿಗೆ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.

ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಕರ್ನಾಟಕ ರಾಜ್ಯದ ಪಾಲಿಗೆ ಅತ್ಯಂತ ಸ್ಮರಣೀಯವಾದುದು. ಹಲವು ಅಡೆ ತಡೆಗಳನ್ನು ಎದುರಿಸಿ, ಕೊನೆಯ ಹಂತದಲ್ಲಿ ರಾಜ್ಯವು ಪಥ ಸಂಚಲನಕ್ಕೆ ರಹದಾರಿ ಪಡೆದುಕೊಂಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಸವಾಲನ್ನು ಹಿಮ್ಮೆಟ್ಟಿಸಿ ಅಚ್ಚರಿಯ ರೀತಿಯಲ್ಲಿ ಸಿದ್ಧಗೊಂಡಿದೆ.  ಕರ್ನಾಟಕದ ಹಿರಿಮೆ ಮತ್ತು ಕನ್ನಡ ಅಸ್ಮಿತೆಯ ಪ್ರತೀಕದಂತಿರುವ ಈ ಸ್ತಬ್ಧಚಿತ್ರವು ಕೇವಲ 10 ದಿನಗಳಲ್ಲಿ ರೂಪುಗೊಂಡಿದೆ.

ಸ್ತಬ್ಧಚಿತ್ರದ ವೈಶಿಷ್ಟಪೂರ್ಣತೆಯಿಂದಲೇ ಗಮನ ಸೆಳೆಯುವ  ಕರ್ನಾಟಕ ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿಯದ್ದು ಅಲ್ಪಾವಧಿಯಲ್ಲಿ ಬೆರಗುಗೊಳಿಸುವಂತಹ ಐತಿಹಾಸಿಕ ಸಾಧನೆಯಂತೆ ಕಂಗೊಳಿಸುತ್ತಿದೆ.
‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಸಂತಸ ಹಂಚಿಕೊಂಡಿದ್ದಾರೆ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್. ಹರ್ಷ, ಐಪಿಎಸ್ ಅವರು.

2023 ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು
1. ಕರ್ನಾಟಕದ ಮಹಿಳೆಯರ ಶೌರ್ಯ,
2. “ರೇಷ್ಮೆ” ಕರ್ನಾಟಕದ ಹೆಮ್ಮೆ
3. ಕರ್ನಾಟಕದ ಪುಷ್ಪೋದ್ಯಮ
4. ಕರ್ನಾಟಕ : ಸಿರಿಧಾನ್ಯದ ನಾಯಕ ಮತ್ತು 5. “ನಾರಿ ಶಕ್ತಿʼಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು.

ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ ʼನಾರಿ ಶಕ್ತಿʼ ವಿಷಯವನ್ನು ʼವಿಷಯ ಆಯ್ಕೆಯ ಪರಿಣತರ ತಂಡʼವು ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶಿಸಲಾಗುತ್ತಿದೆ.

ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿಗೌಡ ಹಾಲಕ್ಕಿ ಮತ್ತು ಸಾಲು ಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು ‘ನಾರಿಶಕ್ತಿ’ (ವುಮನ್ ಪವರ್) ಹೆಸರಿನಲ್ಲಿ ರಾಜ್ಯವು 2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತಪಡಿಸಿದೆ. ಇವರುಗಳು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪುರಸ್ಕಾರದಿಂದ ಗೌರವಿಸಿದೆ. ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು – ಜಾತಿ – ಅಂತಸ್ತು ಯಾವುದು ಅಡ್ಡಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ  ಹೆಮ್ಮೆಪಡುತ್ತದೆ  .ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗಿದೆ.

ವಿಷಯ ಆಯ್ಕೆಯ ಬಳಿಕ, ಸ್ತಬ್ಧಚಿತ್ರದ ಮಾದರಿ (ಕೀ ಮಾಡಲ್) ಮತ್ತು ಸಂಗೀತದ ಹಂತವನ್ನು ದಾಟಬೇಕಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ʼಕನ್ನಡ ಸಂಗೀತʼವನ್ನು ಹಾಗೆಯೇ ಉಳಿಸಿಕೊಂಡಿತ್ತು. ಕಾರವಾರದ ಪುರುಷೋತ್ತಮ ಪಾಂಡುರಂಗ ಅವರ ನೇತೃತ್ವದ ಹಾಲಕ್ಕಿಯವರ ʼಸುಗ್ಗಿ ಕುಣಿತʼದ 20 ಮಂದಿಯ ಕಲಾವಿದರ ತಂಡಕ್ಕೆ ಅನುಮತಿಯೂ ಸಿಕ್ಕಿತ್ತು. ಹೀಗಾಗಿ, ರಾಜ್ಯವು ಸ್ತಬ್ಧಚಿತ್ರದ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಾಗಲೇ 2022ರ ಡಿಸೆಂಬರ್ 28ರಂದು ನಡೆದ ಕೊನೆಯ ಸುತ್ತಿನ ಸಭಾಸೂಚನಾ ಪತ್ರದಲ್ಲಿ ಕರ್ನಾಟಕ ಹೆಸರು ಸೇರ್ಪಡೆಗೊಂಡಿರಲಿಲ್ಲ.  ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕಳೆದ 8 ವರ್ಷಗಳಲ್ಲಿ ಭಾಗವಹಿಸುವ ಅವಕಾಶ ದೊರೆಯದ ಹಾಗೂ ಅತಿ ಕಡಿಮೆ ಬಾರಿ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ನೀಡುವಂತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವು ಈ ಬಾರಿ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ 2023ರ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರೆತಿರಲಿಲ್ಲʼಎಂಬುದಾಗಿ ತಿಳಿದುಬಂದಿತ್ತು. ಆದರೂ, ಉತ್ಸಾಹ ಕಳೆದುಕೊಳ್ಳದ ಇಲಾಖೆಯು 2022ರ ಡಿಸೆಂಬರ್ 30 ರಂದು ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದು ʼಕರ್ನಾಟಕದ ನಿರಂತರ ಸಾಧನೆಯನ್ನು ಪರಿಗಣಿಸಿʼ ಈ ಬಾರಿಯೂ ಮತ್ತೊಮ್ಮೆ ಅವಕಾಶ ನೀಡುವಂತೆ ಕೋರಿತ್ತು.
ಇದಾದ 12 ದಿನಗಳ ಬಳಿಕ (2023ರ ಜನವರಿ 12) ರಕ್ಷಣಾ ಸಚಿವಾಲಯದಿಂದ ಜನವರಿ 15ರಂದು ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಪತ್ರದಲ್ಲಿ ತಿಳಿಸಿತ್ತು. ರಕ್ಷಣಾ ಸಚಿವಾಲಯದ ರಾಷ್ಟ್ರೀಯ ರಂಗಶಾಲಾ ಕ್ಯಾಂಪ್ನ ಲ್ಲಿ ನಡೆದ ಕೊನೆ ಸುತ್ತಿನ ಸಭೆಯಲ್ಲಿ ಇಲಾಖೆಯು ಭಾಗವಹಿಸಿತ್ತು. ಈ ಸಭೆಯಲ್ಲಿ ರಾಜ್ಯದ ಕೀ ಮಾಡಲ್ ಮತ್ತು ಸಂಗೀತಕ್ಕೆ ಅನುಮೋದನೆ ನೀಡಿತ್ತು. ಬಳಿಕ ಜ. 16ರಂದು ಅಧಿಕೃತವಾಗಿ ಕರ್ನಾಟಕದ ಹೆಸರು ʼ2023ರ ಸ್ತಬ್ಧಚಿತ್ರದ ಪಟ್ಟಿʼಯಲ್ಲಿ ಸೇರ್ಪಡೆಗೊಂಡಿತ್ತು ಎಂದು ಪಿ.ಎಸ್. ಹರ್ಷ ಅವರು ತಿಳಿಸಿದ್ದಾರೆ.

ಹತ್ತು ದಿನಗಳಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಬೃಹತ್ ಸವಾಲು ಎದುರಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮೆ ಹಾಗೂ ಸಂಸ್ಕøತಿಯ ಮಹತ್ವವನ್ನು ಎತ್ತಿಹಿಡಿಯುವ ಮಾನ್ಯ ಮುಖ್ಯಮಂತ್ರಿಗಳ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದಿತ್ತು. ಎಲ್ಲಾ ದೃಷ್ಟಿಕೋನಗಳಿಂದ ವಿಮರ್ಶಿಸಿ, ಪರಿಣತರು, ವಿಷಯ ತಜ್ಞರು, ಕಲಾನಿರ್ದೇಶಕರು ಮತ್ತು ಕಲಾವಿದರೊಂದಿಗೆ ಪರಾಮರ್ಶಿಸಿಕೊಂಡು ಇಲಾಖೆಯು ಕೆಲಸವನ್ನು ಕೈಗೆತ್ತಿಕೊಂಡಿತ್ತು. ಹಾಕಿಕೊಂಡ ಕಾರ್ಯತಂತ್ರದ ರೂಪು ರೇಷ್ಮೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಮೈದಳೆದಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಮೂಡಿ ಬಂದಿದೆ. ಇದಕ್ಕಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಆರಂಭದಲ್ಲಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜಿನಂತೆ ಸವಾಲುಗಳು ಕಂಡಿದ್ದವು. ಇಂದು ಅವುಗಳೆಲ್ಲವೂ ಮಂಜಿನಂತೆ ಕರಗಿವೆ. ಸಿದ್ಧಗೊಂಡಿರುವ ಸ್ತಬ್ಧಚಿತ್ರವನ್ನು ರಾಜ್ಯದ ಪರವಾಗಿ ಪ್ರದರ್ಶಿಸಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆʼ ಎಂದು ಡಾ. ಹರ್ಷ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಸ್ತಬ್ಥಚಿತ್ರದಲ್ಲಿ ಏನಿರಲಿದೆ: ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ, ಕೈನಲ್ಲಿ ಮಗು ಆಡಿಸುತ್ತಿರುವ ಸೂಲಗಿತ್ತಿ ನರಸಮ್ಮ ಅವರನ್ನು ತೋರಿಸಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ಅವರು ಸಿದ್ಧಹಸ್ತರು. ಏಳು ದಶಕಗಳಲ್ಲಿ ಇಂತಹ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.
ಹಚ್ಚ ಹಸುರಿನಿಂದ ಕೂಡಿರುವ ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಗಿಡಮರಗಳನ್ನು ಪೆÇೀಷಿಸುತ್ತಿರುವ ತುಳಸಿಗೌಡ ಹಾಲಕ್ಕಿ ಅವರನ್ನು ತೋರಿಸಿದೆ. ‘ವೃಕ್ಷಮಾತೆ’ ಎಂದೇ ಹೆಸರಾಗಿರುವ ತುಳಸಿ ಅವರು ಅಪರೂಪದ ಪ್ರಭೇದದ ಸಸ್ಯಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣತರು. 30,000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿರುವ ಶ್ರೇಯ ಇವರದ್ದು. ಇದನ್ನು ಗಿಡಗಳ ಮಧ್ಯೆ ಕುಳಿತು ಅವುಗಳನ್ನು ಪೆÇೀಷಿಸುತ್ತಿರುವ ರೀತಿಯಲ್ಲಿ ಅವರನ್ನು ತೋರಿಸಿದೆ.

ಕಣ್ಣಿಗೆ ಮುದ ನೀಡುವ ಕಾಡಿನ ನಿಜಸ್ವರೂಪದಂತಿರುವ ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ರಾಜ್ಯ ಹೆದ್ದಾರಿಯ ಆಜುಬಾಜಿನಲ್ಲಿ 8000 ಮರಗಳನ್ನು ನೆಟ್ಟು ನೀರೆರೆದುಬೆಳೆಸಿದ ಸಾಲುಮರದ ತಿಮ್ಮಕ್ಕ ಅವರನ್ನು ತೋರಿಸಿದೆ.

ಇದನ್ನು ಅವರು ಗಿಡಗಳಿಗೆ ನೀರೆರೆಯುತ್ತಿರುವಂತೆ ಬಿಂಬಿಸಿದೆ. ಇದಲ್ಲದೆ 75 ಆಲದಮರಗಳನ್ನು 4.5 ಕಿ. ಮೀ ಉದ್ದದ ರಾಜ್ಯಹೆದ್ದಾರಿಯಲ್ಲಿ ಬೆಳೆಸಿದ್ದಾರೆ. ಇದನ್ನು ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ಬೃಹತ್ ಆಲದಮರದ ಮೂಲಕ ಚಿತ್ರಿಸಿದೆ.
ತೀವ್ರ ಪೈಪೆÇೀಟಿ : ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆ, ಪ್ರಾತಿನಿಧ್ಯತೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯ 14ಕ್ಕೆ ಇಳಿಸಿದೆ. ಇದು ತೀವ್ರ ಪೈಪೆÇೀಟಿಗೆ ಕಾರಣವಾಗಿದೆ.

ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ 14ನೇ ಬಾರಿಗೆ ಭಾಗಹಿಸಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ರಾಜ್ಯವು ಈ ಬಾರಿ ಭಾಗಹಿಸುತ್ತಿರುವುದು ಐತಿಹಾಸಿಕ ಸಂಗತಿಯಾಗಿದೆ.

ಪ್ರಶಸ್ತಿಗಳ ಸರಮಾಲೆ: 2022ರ ಸ್ತಬ್ಧಚಿತ್ರದಲ್ಲಿ ಇಲಾಖೆಯು ಪ್ರದರ್ಶಿಸಿದ್ದ ʼಸಾಂಪ್ರದಾಯಿಕ ಕಸೂತಿ ತೊಟ್ಟಿಲುʼಗೆ ದ್ವಿತೀಯ ಪ್ರಶಸ್ತಿ ದೊರೆತಿತ್ತು.

2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳನ್ನು ಪ್ರದರ್ಶಿಸಿತ್ತು. ಇದಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು.

2012ರ ಗಣರಾಜ್ಯೋತ್ಸವದಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಯ ಸ್ತಬ್ಧಚಿತ್ರಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು.

2011ರಲ್ಲಿ ಬೀದರ್‌ನ ಪಾರಂಪರಿಕ ಕಲೆಯಾದ ‘ಬಿದರಿ’ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿತ್ತು.

2008ರಲ್ಲಿ ಹೋಯ್ಸಳ ವಾಸ್ತುಶಿಲ್ಪಕ್ಕೆ ದ್ವಿತೀಯ ಪ್ರಶಸ್ತಿ ಸಂದಿತ್ತು.

2005ರಲ್ಲಿ ಕರ್ನಾಟಕದಲ್ಲಿ ನಡೆಯಲಿದ್ದ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು.

2008ರಲ್ಲಿ ಹೊಯ್ಸಳ ಕಲೆಯ ಸ್ತಬ್ಧಚಿತ್ರವು ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನರ್ ಗಾಗಿ ಪ್ರಶಸ್ತಿ ಲಭಿಸಿತ್ತು. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

error: Content is protected !!