ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ಮುದ್ರಿಸಿರುವ ಆಹ್ವಾನಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಲಾಗಿದೆ. ಇದರ ಬದಲಾಗಿ
ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಎಂದು ನಮೂದಿಸಬೇಕೆಂದು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ ದಿನಾಂಕ: 06-09-1962 ರಲ್ಲಿ ಮೈಸೂರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಕರ್ನಾಟಕರತ್ನ ದಿವಂಗತ ಎಸ್. ನಿಜಲಿಂಗಪ್ಪ ನವರ ಅಮೃತಹಸ್ತದಿಂದ ಕ್ರೀಡಾಂಗಣವು ಉದ್ಘಾಟಿಸಲ್ಪಟ್ಟಿದೆ. ಅಂದಿನಿಂದ ಈ ಕ್ರೀಡಾಂಗಣದ ಹೆಸರನ್ನು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವೆಂದು ಕರೆಯಲ್ಪಡುತ್ತಿದೆ. ಅಲ್ಲಿ ನಡೆಯುವ ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲೂ ಸಹ ಇದೇ ಹೆಸರು ನಮೂದಿಸಲಾಗಿದೆ.

ಆದರೆ ದಿನಾಂಕ: 26-01-2025 ರಂದು ನಡೆಯಲಿರುವ ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಿ ಸ್ವಾಮೀಜಿಗಳ ಹೆಸರನ್ನು ಬಿಟ್ಟಿರುವುದು ಖಂಡನೀಯ ಮತ್ತು ಇದು ತ್ರಿವಿಧ ದಾಸೋಹಿಗಳಾದ ಪರಮಪೂಜ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಜೀಗಳ ಭಕ್ತರಿಗೆ ನೋವುಂಟು ಮಾಡಿದೆ. ತಕ್ಷಣ ಈಗ ಮುದ್ರಿಸಿರುವ ಆಹ್ವಾನಪತ್ರಿಕೆಯನ್ನು ಹಿಂಪಡೆದು ಶ್ರೀಗಳ ಹೆಸರನ್ನು ಮುದ್ರಿಸಬೇಕೆಂದು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜೀತೇಂದ್ರ.ಎನ್, ಮಂಜುನಾಥ್.ಎ.ಬಿ, ರುದ್ರೇಶ್.ವಿ.ಹೆಚ್.ಪಿ, ಅಭಿಲಾಶ್, ಯರಿಸ್ವಾಮಿ, ಛಲವಾಧಿ ತಿಪ್ಪೇಸ್ವಾಮಿ ಇನ್ನು ಇತರರು ಉಪಸ್ಥಿತರಿದ್ದರು.



