ಸುದ್ದಿಒನ್, ಚಿತ್ರದುರ್ಗ, ಜ 26: ಸಂವಿಧಾನ ಭಾರತ ರಾಷ್ಟ್ರದ ಆತ್ಮವಾಗಿದೆ. ಯುವಜನತೆ ರಾಷ್ಟ್ರದ ಭವಿಷ್ಯದ ಶಿಲ್ಪಿಗಳೆಂಬ ನಿಟ್ಟಿನಲ್ಲಿ ಸಂವಿಧಾನದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ನಗರದ ಎಸ್ ಜೆ ಎಸ್ ಸಮೂಹ ವಿದ್ಯಾಸಂಸ್ಥೆಗಳ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಗಣರಾಜ್ಯೋತ್ಸವವು
ಸ್ವಾತಂತ್ರ್ಯೋತ್ತರ ಭಾರತದ ಆಡಳಿತಾತ್ಮಕ ಬದ್ಧತೆಗಳು ಮತ್ತು ಪ್ರಜಾಸತ್ತಾತ್ಮಕ ಆದರ್ಶಗಳ ಸ್ಮರಣೆಯಾಗಿದೆ. ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ಮೌಲ್ಯಗಳು ಕೇವಲ ಪಠ್ಯವಲ್ಲದೆ, ಸಮಾಜದ ದೈನಂದಿನ ಆಚರಣೆಯಾಗಿ ರೂಪುಗೊಳ್ಳಬೇಕು. ವೈವಿಧ್ಯತೆಯೊಳಗಿನ ಏಕತೆಯೇ ಭಾರತದ ಶಕ್ತಿ ಎಂಬುದನ್ನು ಮನನ ಮಾಡಿಕೊಂಡು, ಭೇದಭಾವ ಮತ್ತು ಅಸಹಿಷ್ಣುತೆಗೆ ಅವಕಾಶ ನೀಡದೆ, ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸಬೇಕು.ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯುವಶಕ್ತಿಯ ಸಕ್ರಿಯ ಪಾತ್ರದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ರಾಷ್ಟ್ರಭಕ್ತಿ ಅಂದರೆ ಘೋಷಣೆಗಳಲ್ಲ, ಕರ್ತವ್ಯನಿಷ್ಠ ಕಾರ್ಯಚಟುವಟಿಕೆಗಳ ಮೂಲಕ ದೇಶಸೇವೆಯನ್ನು ಸಾಧಿಸುವುದೇ ಅದರ ನಿಜವಾದ ಅರ್ಥವಾಗಿದೆ. ಸಂವಿಧಾನವು ಯುವಜನತೆಯನ್ನು ಜಾಗೃತ ನಾಗರಿಕರಾಗಿ ರೂಪಿಸಿ, ಸಂವಿಧಾನಾತ್ಮಕ ಆದರ್ಶಗಳನ್ನು ಕಾಪಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಆಶಯವನ್ನು ಹೊಂದಿದೆ ಎಂದು ಹೇಳಿದರು.
ಶಾರದ ಬಾಲಕಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ, ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ, ಎಸ್ ಜೆ ಎಸ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಂಶುಪಾಲರಾದ ದಿನೇಶ ಹಾಗೂ ಭೋದಕ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.






