ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 19 : ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆಗಳನ್ನು ದುರಸ್ಥಿ ಮಾಡದಿರುವ ಲೋಕೋಪಯೋಗಿ ಇಲಾಖೆ ನಿರ್ಲಕ್ಷೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ
ಪ್ರವೀಣ್‍ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-13 ರಲ್ಲಿ ಆಗಿಂದಾಗ್ಗೆ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುತ್ತಿರುತ್ತವೆ. ರೈಲ್ವೆ ಅಂಡರ್ ಬ್ರಿಡ್ಜ್‍ನಲ್ಲಿ ರಸ್ತೆ ಸಿಂಕ್ ಆಗಿದೆ. ಸರ್ವಿಸ್ ರಸ್ತೆಗಳಲ್ಲಿ ಗಿಡ-ಮರಗಳಿಲ್ಲ. ಅಪಘಾತದಿಂದ ಮೃತಪಟ್ಟ ಪ್ರಾಣಿಗಳ ದೇಹಗಳನ್ನು ತೆಗೆಯುವುದಿಲ್ಲ. ಯಾವುದೇ ನಿರ್ಬಂಧವಿಲ್ಲದೆ ವಾಹನಗಳಿಂದ ಟೋಲ್ ಮಾತ್ರ ಸಂಗ್ರಹಿಸಲಾಗುತ್ತಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ-ನಾಲ್ಕರ ಎರಡು ಬದಿಯಲ್ಲಿ ವಿದ್ಯುತ್ ದೀಪಗಳಿಲ್ಲ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-13 ರಲ್ಲಿ ಶಾಲಾ-ಕಾಲೇಜುಗಳಿದ್ದು, ದಿನನಿತ್ಯವೂ ಮಕ್ಕಳು ಜೀವ ಭಯದಿಂದ ಓಡಾಡುವಂತಾಗಿದೆ.
ಪ್ರಶ್ನಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಕನ್ನಡ ಭಾಷೆ ಬಾರದ ಈ ಅಧಿಕಾರಿಗಳು ಹಿಂದಿ ತೆಲುಗಿನಲ್ಲಿ ಮಾತನಾಡುತ್ತಾರೆ. ಕನ್ನಡಿಗರನ್ನು ನೇಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್ ಆಗ್ರಹಿಸಿದರು.
ಓಬಳೇಶ್‍ಯಾದವ್, ಕೃಷ್ಣಮೂರ್ತಿ, ಸತೀಶ್, ಮೋಹನ್‍ಬಾಬು, ರವಿಕುಮಾರ್, ಮಾರುತಿ, ಅನಿಲ್‍ಕುಮಾರ್, ಧನಂಜಯ, ಸೋಮಣ್ಣ, ಶ್ರೀನಿವಾಸ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.