ದಾವಣಗೆರೆ: ರಾಜ್ಯ ಸರ್ಕಾರ ಹಲವು ವಿಮಾನ ನಿಲ್ದಾಣಗಳಿಗೆ ಮರುನಾಮಕರಣ ಮಾಡುವುದಕ್ಕೆ ನಿರ್ಧಾರ ಮಾಡಿದೆ, ಅದರಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದರ ನಿರ್ಧಾರಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೀಗ ರೇಣುಕಾಚಾರ್ಯ ಕೂಡ ಈ ಬಗ್ಗೆ ಮಾತನಾಡಿದ್ದು, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮತಾಂಧ ಹಾಗೂ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ಟಿಪ್ಪು ಸುಲ್ತಾನನ ಹೆಸರಿಡುತ್ತಿರುವುದು ಯಾಕೆ. ಅದನ್ನು ಬಿಟ್ಟು ಮೈಸೂರು ಮಹಾರಾಜರ ಹೆಸರನ್ನು ಮರುನಾಮಕರಣ ಮಾಡಿ. ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಿದರೆ ಜನ ರೊಚ್ಚಿಗೇಳುತ್ತಾರೆ, ಕ್ರಾಂತಿಯಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ನಾಲ್ಕು ವಿಮಾನ ನಿಲ್ದಾಣಗಳ ನಾಮಕರಣಕ್ಕೆ ಮುಂದಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ನಾವು ಇದನ್ನ ಸ್ವಾಗತ ಮಾಡುತ್ತೇವೆ. ಮೈಸೂರು ಅಂದ್ರೆ ಮಹಾರಾಜರು ಆಳಿರುವ ನಾಡು, ಅದು ಪುಣ್ಯ ಭೂಮಿ. ಟಿಪ್ಪು ಒಬ್ಬ ಮತಾಂಧ, ದೇಶ ದ್ರೋಹಿ, ಹಿಂದು ದೇವಸ್ಥಾನಗಳನ್ನ ನಿರ್ನಾಮ ಮಾಡಿದ ವ್ಯಕ್ತಿ. ಆತನ ಹೆಸರಿಡಲು ಮುಂದಾದರೆ ರಾಜ್ಯದ ಜನರು ಸುಮ್ಮನಿರಲ್ಲ. ಕೇವಲ ಮತಾಂಧರೇನಾ ನಿಮಗೆ ಕಣ್ಣಿಗೆ ಕಾಣೋದು..?, ಮಹಾರಾಜರ ಹೆಸರು ನಿಮಗೆ ಕಣ್ಣಿಗೆ ಕಾಣಲಿಲ್ವಾ..? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ನೀವು ಟಿಪ್ಪು ಹೆಸರಿಡಲು ಪ್ರಯತ್ನ ಮಾಡಿದರೆ ನಾವು ಸಹಿಸಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.