ಬೆಂಗಳೂರು: ಎಂಪಿ ರೇಣುಕಾಚಾರ್ಯ ಸ್ವಪಕ್ಷದವರ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಯಾರು..? ಪ್ರಣಾಳಿಕೆ ಯಾವಾಗ ಬಿಡುಗಡೆ ಮಾಡಿದ್ರಿ? ನಮ್ಮ ಅರ್ಧ ಲೀಟರ್ ಹಾಲು ಯಾರು ಕೇಳ್ತಾರೆ.? ನಮ್ಮವರೆಲ್ಲ ಎಲ್ಲಿ ಮಲಗಿದ್ರಿ..? ಚುನಾವಣೆ ಒಂದು ವಾರ ಇರುವಾಗ ಎದ್ದು ಬಂದಿದ್ದೀರಿ. ಅಧಿಕಾರದಲ್ಲಿದ್ದಾಗ ಅಕ್ಕಿ ಕೊಡಲಿಲ್ಲ, ಅರ್ಧ ಲೀಟರ್ ಹಾಲು ಕೊಡ್ತೀನಿ ಎಂದ್ರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೋದಿಯನ್ನು ಗಲ್ಲಿ ಗಲ್ಲಿಗಳಲ್ಲಿ ಸುತ್ತಿಸಿದ್ರಿ. ಮೋದಿ ಮುಖ ತೋರಿಸಿ ವೋಟು ಕೇಳಿದ್ರಿ. ಹಾಗಾದ್ರೆ ಪಕ್ಷಕ್ಕೆ ನೀವು ನೀಡಿದ ಕೊಡುಗೆ ಏನು?. ಮೋದಿ ಬಂದಾಗ ಜನ ತೋರಿಸಬೇಕು ಅನ್ನುವ ಉದ್ದೇಶ ನಿಮ್ಮದು, ಬಿಜೆಪಿಯನ್ನು ಗೆಲ್ಲಿಸುವ ಉದ್ದೇಶದಿಂದಲ್ಲ ಎಂದು ಹರಿಹಾಯ್ದಿದ್ದಾರೆ.
ಬೊಮ್ಮಾಯಿ ವಿರುದ್ಧವು ರೇಣುಕಾಚಾರ್ಯ ವಾಗ್ದಾಳಿ ನಡೆಸಿ, ಬಿಜೆಪಿಯಲ್ಲಿ ಸುಧಾಕರ್ ಮಾತ್ರಾನ ಸೋತಿದ್ದು..? ಸುಧಾಕರ್ ಮನೆಗೆ ಸಮಾಧಾನ ಹೇಳೋಕೆ ಹೋಗ್ತಾರೆ. ಸೋತ ನಾವು ಯಾರು ಬೊಮ್ಮಾಯಿಗೆ ಕಾಣಿಸಲ್ವ.? ಎರಡು ಖಾತೆ ಕೇಳಿದವನು, ಪಾರ್ಟಿ ಕಥೆ ಮುಗಿಸುತ್ತೇನೆ ಎಂದವನ ಮನೆಗೆ ಹೋದ್ರಿ. ನಮಗೆ ಒಂದು ಕರೆಯನ್ನಾದರೂ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ನಾನು ಪಕ್ಷದ ವಿರುದ್ಧ ಮಾತನಾಡಲ್ಲ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಕೆಲವರ ದೌರ್ಬಲ್ಯಗಳ ಬಗ್ಗೆ ಮಾತನಾಡಬೇಕಾಗುತ್ತದೆ. ಬಿಎಸ್ ವೈರನ್ನು ಸಿಎಂ ಹುದ್ದೆಯಿಂದ ಯಾಕೆ ಇಳಿಸಿದ್ರಿ..? ಬಿಎಸ್ವೈ ವಿರುದ್ಧ ಮಾತನಾಡುವುದಕ್ಕೆ ಕೆಲವರನ್ನು ಬಿಟ್ಟರೆ ಯಡಿಯೂರಪ್ಪಗೆ ಯಾವುದೇ ವೈಯಕ್ತಿಕ ನಷ್ಟವಾಗಿಲ್ಲ ಎಂದಿದ್ದಾರೆ.