ದಾವಣಗೆರೆ: ರಾಜ್ಯ ಬಿಜೆಪಿ ರಾಜಕಾರಣದಲ್ಲಿ ರೇಣುಕಾಚಾರ್ಯ ಅವರು ಹೇಳಿದ ಮಾತು ಎಲ್ಲರು ತಿರುಗಿ ನೋಡುವಂತೆ ಮಾಡಿದೆ. ಸದ್ಯ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇದೆ. ಆ ಹುದ್ದೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನೇ ಆಯ್ಕೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಶಾಸಕ ಬಿಎಸ್ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಲಿದೆ. ಪ್ರಧಾನಿ ಮೋದಿ ಮಾಸ್ ಲೀಡರ್, ದೇಶಕ್ಕೆ ನಾಯಕ. ಆದರೆ ರಾಜ್ಯದಲ್ಲಿ ಅವರ ಫೋಟೋ ತೋರಿಸಿದರೆ ಸಾಲದು. ಅದು ಮತವಾಗಿ ಪರಿವರ್ತನೆಯಾಗಬೇಕು. ಕರ್ನಾಟಕದಲ್ಲಿ ಬಿಜೆಪಿಗೆ ಮತ ತರುವ ಶಕ್ತಿ ಇರುವುದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ.
ರಾಜ್ಯದಲ್ಲಿ ಬಿಜೆಪಿಗೆ ಮತ ತರುವ ಶಕ್ತಿ ವಿಜಯೇಂದ್ರ ಅವರಿಗೆ ಇದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ತಿ ಬಗ್ಗೆ ಬಿಜೆಪಿಯಲ್ಲಿಯೇ ಹಲವರಿಗೆ ಬೇಸರವಿದೆ. ಮೈತ್ರಿ ಅಂತ ಹೇಳಿ ಬಿಜೆಪಿಯನ್ನೇ ಕುಮಾರಸ್ವಾಮಿಗೆ ಅಡ ಇಡಲಾಗಿದೆ. ಪಕ್ಷಕ್ಕೆ ಒಳ್ಳೆಯದಾಗುವುದಿದ್ದರೆ ಮೈತ್ರಿ ಮಾಡಿಕೊಳ್ಳಲಿ. ಪಕ್ಷದಲ್ಲೂ ಸಮರ್ಥ ನಾಯಕರಿದ್ದಾರೆ. ವಿಜಯೇಂದ್ರರಂತಹ ವ್ಯಕ್ತಿಗೆ ನಾಯಕತ್ವ ಕೊಟ್ಟರೆ ಒಳಿತಾಗುತ್ತದೆ ಎಂದಿದ್ದಾರೆ.
ಈಗಾಗಲೇ ಬಿಜೆಪಿಯಲ್ಲೂ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಲೋಕಸಭೆಯಲ್ಲಿ ಗೆಲ್ಲುವುದಕ್ಕಾಗಿಯೇ ಜೆಡಿಎಸ್ ಜೊತೆಗೆ ಕೈಜೋಡಿಸಿದ್ದಾರೆ. ವಿಧಾನಸಭೆಯಲ್ಲಿ ಸೋಲಾಗುವುದಕ್ಕೆ, ಯಡಿಯೂರಪ್ಪ ಅವರನ್ನೂ ಮೂಲೆಗೆ ಸರಿಸಿರುವುದೇ ಕಾರಣ ಎನ್ನಲಾಗಿತ್ತು. ಇದೀಗ ಲೋಕಸಭೆಯಲ್ಲಿ ಗೆಲ್ಲುವುದಕ್ಕೆ ಯಡಿಯೂರಪ್ಪ ಕುಟುಂಬಕ್ಕೆ ಪ್ರಾಶಸ್ತ್ಯ ನೀಡಿ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.