ಬೆಂಗಳೂರು : ಖ್ಯಾತ ಆರೋಗ್ಯ ತಜ್ಞ ಕೆ.ಸಿ.ರಘು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಈ ಸಂಬಂಧ ರಘು ಅವರ ಪತ್ನಿ ಆಶಾ ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಂತಿಮ ದರ್ಶನದ ವಿಚಾರಕ್ಕೂ ಮಾಹಿತಿ ನೀಡಿದ್ದಾರೆ. ಕೆ ಸಿ ರಘು ಅವರು ಹಲವು ವರ್ಷಗಳಿಂದ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. 60 ವರ್ಷ ಪೂರೈಸಿದ್ದ ರಘು ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ರಘು ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೆ ಸಿ ರಘು ಅವರ ಆಸೆಯಂತೆ ಅವರ ದೇಹವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗುತ್ತಿದೆ. ಹೀಗಾಗಿ ಅಂತಿಮ ದರ್ಶನಕ್ಕೆ ದಾಸರಹಳ್ಳಿಯ ಅಮೃತನಗರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕೆ ಸಿ ರಘು ಅವರ ಆರೋಗ್ಯದ ವಿಚಾರದಲ್ಲಿ ಅಗಾಧ ಜ್ಞಾನ ಹೊಂದಿದ್ದರು. ಆಹಾರದ ವಿಚಾರದಲ್ಲೂ ಸ್ಪಷ್ಟ ಮಾಹಿತಿ ನೀಡುತ್ತಿದ್ದರು. ಆಹಾರಕ್ಕೆ ಸಂಬಂಧಪಟ್ಟಂತೆ ಅನೇಕ ದಿನಪತ್ರಿಕೆಗಳಿಗೂ ರಘು ಅವರು ಅಂಕಣಗಳನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲ ಸಾಮಾನ್ಯ ವಿಜ್ಞಾನ ಹಾಗೂ ಆರ್ಥಿಕತೆಯ ವಿಷಯಗಳ ಸಂಬಂಧ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ನವಜಾತ ಶಿಶುಗಳಲ್ಲಿ ಕಂಡು ಬರುವ ಕಾಯಿಲೆಗಳ ಪೌಷ್ಠಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡು ಹಿಡಿದು, ದೇಶ ಮತ್ತು ವಿದೇಶಕ್ಕೂ ಸರಬರಾಜು ಮಾಡಿದ್ದರು. ಈ ಮೂಲಕ ಐದು ಸಾವಿರ ನವಜಾತ ಶಿಶುಗಳ ಸಾವನ್ನು ತಪ್ಪಿಸಿದ್ದರು. ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಎಂದರ ರಘು ಅವರೆ ಸ್ಥಾಪಿಸಿದ್ದ ಪ್ರಿಸ್ಟಿನ್ ಆರ್ಗ್ಯಾನಿಕ್ ಸಂಸ್ಥೆ.