ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.08): ಸಂವಿಧಾನದ ಮೆಟ್ಟಿಲುಗಳತ್ತ ಸಣ್ಣ ಸಣ್ಣ ಹೆಜ್ಜೆ ಹಾಕಿಕೊಂಡು ಹಕ್ಕುಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರು ಕರ್ತವ್ಯಕ್ಕೆ ಬದ್ದರಾಗಬೇಕೆಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದರು.
ಮಾನವ ಹಕ್ಕುಗಳು ಸಂವಿಧಾನದ ಮೆಟ್ಟಿಲುಗಳಿದ್ದಂತೆ. ಜಾತ್ಯಾತೀತ, ಧರ್ಮಾತೀತ, ಪಂಥಾತೀತವಾಗಿ ಎಲ್ಲರೂ ಮಾನವ ಹಕ್ಕುಗಳನ್ನು ಪಾಲಿಸಬೇಕು. ಮಾಹಿತಿ ಹಕ್ಕಿಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತಿಗೊಳಿಸಬೇಕಾಗಿರುವುದರಿಂದ ನಮ್ಮ ಮಠ ಸದಾ ನಿಮ್ಮಗಳ ಜೊತೆ ಇರುತ್ತದೆ ಎಂದು ಸ್ವಾಮೀಜಿ ಭರವಸೆ ನೀಡಿದರು.
ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಈಗ ಭಾಗಶಃ ಸಂವಿಧಾನಬದ್ದವಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಮಾಹಿತಿ ಹಕ್ಕಿಗೆ ಸಂಬಂಧಿಸಿದಂತೆ ಎಲ್ಲರನ್ನು ಜಾಗೃತಿಗೊಳಿಸಿದರೆ ನೂರಕ್ಕೆ ನೂರು ಸಂವಿಧಾನಬದ್ದವಾಗುವುದರಲ್ಲಿ ಅನುಮಾನವಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ವಿರುದ್ದ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಜಿಲ್ಲಾ ಘಟಕ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಸಲಹೆಗಾರ ರಾಮಕೃಷ್ಣಪ್ಪ ಮಾತನಾಡಿ ಮಾನವನ ಸ್ಥಾನ, ಅಸ್ಮಿತೆ, ಹಕ್ಕು ಉಲ್ಲಂಘನೆಯಾಗುತ್ತಲೆ ಇದೆ. ನಾಗರೀಕತೆ ಬೆಳೆದಂತೆಲ್ಲಾ ಪ್ರಕೃತಿಯಲ್ಲಿ ಎಲ್ಲರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ ಎನ್ನುವುದು ಕ್ರಮೇಣ ಅರಿವಿಗೆ ಬರತೊಡಗಿದೆ. ಬಡತನ, ಅನಕ್ಷರತೆಯೇ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಮುಖ ಕಾರಣ. ಮಾಹಿತಿ ಕೊರತೆಯಿರುವವರನ್ನು ಗುರುತಿಸಿ ಅಂತಹವರಿಗೆ ಹಕ್ಕುಗಳನ್ನು ಕೊಡಿಸುವುದರ ಜೊತೆ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ದ ಅರಿವು ಮೂಡಿಸುವ ಕೆಲಸವಾಗಬೇಕೆಂದು ಸಮಿತಿಗೆ ಕರೆ ನೀಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಕೆ. ಮಾತನಾಡಿ ಅಸ್ಪøಶ್ಯತೆಯನ್ನು ತೊಲಗಿಸಿ ಸಮಾನತೆ ಸೃಷ್ಟಿಸಿ ಎಲ್ಲರಿಗೂ ಹಕ್ಕುಗಳನ್ನು ಒದಗಿಸುವುದು ಸಮಿತಿಯ ಉದ್ದೇಶ. ಈ ನಿಟ್ಟಿನಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ರಾಜ್ಯ ಗೌರವಾಧ್ಯಕ್ಷ ಹರೀಶ್‍ಬಾಬು ಮಾತನಾಡಿ ಸಕಲ ಜೀವ ರಾಶಿಗಳಿಗೂ ಸಮಾನತೆ ಎನ್ನುವುದು ತುಂಬಾ ಮುಖ್ಯ. ಗಂಡು-ಹೆಣ್ಣು ಎನ್ನುವ ತಾರತಮ್ಯ ಮೊದಲು ನಿವಾರಣೆಯಾಗಬೇಕು.
ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲರಂತೆ ಗೌರವದಿಂದ ಕಾಣುವಂತಾಗಬೇಕು. 125 ಅನಾಥ ಮಕ್ಕಳಿಗೆ ದಿನಕ್ಕೆ ಮೂರು ಹೊತ್ತು ಊಟ ಕೊಡುತ್ತಿದ್ದೇನೆ. ಇದರಿಂದ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ರಾಮಾನಂದನಾಯ್ಕ, ಉಪಾಧ್ಯಕ್ಷ ರವಿಕುಮಾರ್, ಖಜಾಂಚಿ ರಂಗಪ್ಪ, ಚಿಕ್ಕಮಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುದರ್ಶನ್, ವಾಣಿಜ್ಯೋದ್ಯಮಿ ಟಿ.ರಮೇಶ್, ಸಮಾಜಸೇವಕ ಹೆಚ್.ಅಣ್ಣಪ್ಪಸ್ವಾಮಿ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.