ಮಂಡ್ಯ : ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಧರ್ಮದ ವಿಚಾರ, ಹಿಜಾಬ್ ವಿಚಾರ, ಮುಸ್ಲಿಂ ಸಮುದಾಯದ ವ್ಯಾಪಾರ ನಿಷೇಧ ವಿಚಾರ ಸಾಕಷ್ಟು ಸದ್ದು ಮಾಡುತ್ತಲೆ ಇದೆ. ಭಜರಂಗದಳದವರು ಮುಸ್ಲಿಂ ಸಮುದಾಯದ ವ್ಯಾಪಾರ ನಿಷೇಧ ಮಾಡಿದ್ರೆ, ಹಲಾಲ್ ಇರುವ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬೇಡಿ ಅಂತ ಬಿಜೆಪಿಯ ಹಲವು ನಾಯಕರು ಹೇಳಿಕೆ ಕೊಡುತ್ತಿದ್ದಾರೆ.
ಈ ಬಗ್ಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಕಳೆದ ಎರಡ್ಮೂರು ತಿಂಗಳಿನಿಂದ ಧರ್ಮ ಧರ್ಮಗಳ ಮಧ್ಯೆ ಎರಡು ರಾಷ್ಟ್ರೀಯ ಪಕ್ಷಗಳು ಕಿಚ್ಚೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಬಿಟ್ಟು ನಾವೆಲ್ಲಾ ಅಣ್ಣ ತಮ್ಮಂದಿರ ರೀತಿಯಲ್ಲಿ ಬಾಳಬೇಕಾಗಿರುವುದು ನಮ್ಮ ಧರ್ಮ ಮತ್ತು ಕರ್ತವ್ಯ. ಜನ ಲೂಡ ಇದನ್ನ ಬಹಳ ಸೂಕ್ಷ್ಮವಾಗಿ ಗಮನಿಸ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತವಾದ ದಿನಗಳಲ್ಲೇ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಇನ್ನು ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡಿ, 2024 ಇನ್ನು ದೂರದ ಮಾತು. ಸದ್ಯಕ್ಕೆ ಒಂದು ವರ್ಷದ ವಿಧಾನಸಭಾ ಚುನಾವಣೆ ಇದೆ. ಪಕ್ಷ ನಂಗೆ ಜವಬ್ದಾರಿ ಕೊಟ್ಟಿದೆ. ಸಂಘಟನೆ ಮಾಡುವ ಹೊರೆ ನನ್ನ ಮೇಲಿದೆ. ಅದನ್ನ ಮುಂದುವರೆಸುತ್ತೇನೆ. ರಾಮನಗರವಾಲಿ, ಮಂಡ್ಯವಾಗಲಿ, ಇನ್ನೊಂದಾಗಲಿ ನಾನು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವಂತದ್ದು ಸೂಕ್ತ ಅಲ್ಲ. ಇಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಎಲ್ಲಿ ನಿಲ್ಲುತ್ತೇನೆ ಎಂಬುದು ಮುಖ್ಯ ಅಲ್ಲ. ನಾನು ಪಕ್ಷ ಸಂಘಟನೆ ಮಾಡೋದು ಮುಖ್ಯ ಎಂದಿದ್ದಾರೆ.