ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎರಡನೇ ಪ್ರಕರಣದಿಂದ ಬಿಗ್ ರಿಲೀಫ್ ಸಿಕ್ಕಿದೆ. ಆರೋಪ ಸಾಬೀತಾಗಿಲ್ಲ ಎಸ್ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಈ ಸಂಬಂಧ ಮುನಿರತ್ನ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಡಾ.ಮಂಜುನಾಥ್ ಗೆದ್ದ ಬಳಿಕ ಸತತವಾಗಿ ಅತ್ಯಾ*ಚಾರ ಪ್ರಕರಣಗಳು, ದಲಿತ ದೌರ್ಜನ್ಯ ಪ್ರಕರಣಗಳನ್ನ ಆದಷ್ಟು ಹಾಕಿಸ್ತಾ ಇದ್ದಾರೆ. ದೇವ್ರು ಇದ್ದಾನೆ, ದೇವ್ರೆ ಎಲ್ಲವನ್ನು ನೋಡಿಕೊಳ್ಳುತ್ತಾನೆ. ನಾನು ದೇವಸ್ಥಾನಕ್ಕೆ ಬಂದಿದ್ದೀನಿ. ಆಗಲೇ ಸುದ್ದಿ ಬಂತು. ನಮ್ಮ ವಕೀಲರು ಹೇಳಿದ್ರು ಬಿ ರಿಪೋರ್ಟ್ ಹಾಕಿದ್ದಾರೆ ಅಂತ. ಬಿ ರಿಪೋರ್ಟ್ ನಲ್ಲಿ ಯಾವ ರೀತಿಯ ಅಂಶಗಳನ್ನ ಹಾಕಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಬೆಂಗಳೂರಿಗೆ ಬಂದ್ಮೇಲೆ, ಅದೆಲ್ಲವನ್ನು ನೋಡಿದ್ಮೇಲೆ ಮಾತನಾಡ್ತೀನಿ ಎಂದಿದ್ದಾರೆ.
ಒಂದು ಹೇಳ್ತೇನೆ, ಯಾರೇ ಆಗಲಿ ಕಂಡವರ ಮನೆ ಹೆಣ್ಣು ಮಕ್ಕಳನ್ನ ಕರೆದುಕೊಂಡು ಬಂದು ಈ ರೀತಿಯ ಸುಳ್ಳು ಕಂಪ್ಲೈಂಟ್ ಕೊಡೋದನ್ನ ನಿಲ್ಲಿಸಬೇಕು. ಯಾರೂ ಕೂಡ ಅಧಿಕಾರದಲ್ಲಿ ಶಾಶ್ವತ ಅಲ್ಲ. ಇಷ್ಟು ದಿನ ಮುನಿರತ್ನ ಒಳ್ಳೆಯವನಾಗಿದ್ದ. ಡಾ.ಮಂಜುನಾಥ್ ಗೆದ್ದ ಮೇಲೆ, ಡಿಕೆ ಸುರೇಶ್ ಸೋತ ಮೇಲೆ, ಕುಸುಮಾ ಎರಡು ಬಾರಿ ಸೋತ ಮೇಲೆ ನನ್ನ ಮೇಲೆ ಈ ರೀತಿಯ ಪ್ರಕರಣಗಳು ದಾಖಲಾಗ್ತಾ ಇದಾವೆ. ನನ್ನ ಪೋಸ್ಟರ್ ಗಳಿಗೆ ಕಾಮುಕ ಅಂತ ಬರೆಯೋದು, ಫ್ಲೆಕ್ಸ್ ಗಳ ಮೇಲೆ ಅತ್ಯಾ*ಚಾರಿ ಅಂತ ಬರೆಯೋದು, ಒಂದೆರಡು ಅಲ್ಲ ರಸ್ತೆಗಳಲ್ಲಿ ಕಲ್ಲೆತ್ತಿಕೊಂಡು ಹೊಡೆಯೋದು, ಮೊಟ್ಟೆಗಳಲ್ಲಿ ಹೊಡೆಯೋದು, ತುಂಬಾ ಹಿಂಸೆ. ಇದಕ್ಕೆಲ್ಲಾ ದೇವ್ರೆ ನೋಡಿಕೊಳ್ತಾನೆ ಎಂದಿದ್ದಾರೆ.

