ಚಿತ್ರದುರ್ಗ, (ಅ.26) : ಮೃತಪಟ್ಟ ಕುರಿಗಳಿಗೆ ಪರಿಹಾರ ಒದಗಿಸುವ ಅನುಗ್ರಹ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಮುಂದುವರೆಸಲು ಸರ್ಕಾರ ಆದೇಶ ನೀಡಿದ್ದು, ಅನುಗ್ರಹ ಯೋಜನೆಗಾಗಿ ಅರ್ಜಿಗಳನ್ನು ಸಂಗ್ರಹಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಬಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೃತಪಟ್ಟ ಕುರಿಗಳಿಗೆ ರೂ.5000/- ದನಗಳಿಗೆ ರೂ.10,000/- ಹಾಗೂ ಕುರಿ ಮರಿಗಳಿಗೆ ರೂ.2500/- ರೂಗಳನ್ನು ಅನುಗ್ರಹ ಯೋಜನೆಯಡಿಯಲ್ಲಿ ನೀಡಲಾಗುವುದು ಎಂದು ಹೇಳಿದರು.
ಶಾಲಾ ಕೈತೋಟಕ್ಕೆ ಆದ್ಯತೆ ನೀಡಿ: ಜಿಲ್ಲೆಯ ಶಾಲೆಗಳಲ್ಲಿ ಕೈತೋಟಗಳನ್ನು ಹೆಚ್ಚಿಸುವ ಮೂಲಕ ಅಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುವ ಮೂಲಕ ಬಿಸಿಯೂಟಕ್ಕೆ ಬೇಕಾಗುವ ತರಕಾರಿಯನ್ನು ಬೆಳೆಯಲು ಸ್ವಾವಲಂಬಿಯಾಗಲು ತಿಳಿಸಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೈತೋಟ ಅಭಿವೃದ್ದಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.