ಸುದ್ದಿಒನ್, ಚಿತ್ರದುರ್ಗ, ನವೆಂಬರ್.17 : ಫೋಕ್ಸೋ ಪ್ರಕರಣದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾಶ್ರೀಗಳನ್ನು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೋರ್ಟ್ ಆದೇಶ ಏನೂ ಬಂದಿದೆ ಅದನ್ನು ಚಾಚು ತಪ್ಪದೇ ಪಾಲಿಸುತ್ತೇವೆ. ಕೋರ್ಟ್ ನಲ್ಲಿ ವಿಷಯ ಇರುವುದರಿಂದ ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದೆ ವೇಳೆ ಹೆಚ್ಡಿಕೆ ವಿರುದ್ಧವೂ ಕಿಡಿಕಾರಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಅವರ ಪಟಾಲಂ ನನ್ನನ್ನು ಕಳ್ಳನನ್ನಾಗಿ ಮಾಡುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಮುಖ್ಯಮಂತ್ರಿ ಆಗಿ ಎರಡು ಬಾರಿ ಹೆಚ್.ಡಿ ಕುಮಾರಸ್ವಾಮಿ ಕೆಲಸ ನಿರ್ವಹಿಸಿದ್ದಾರೆ. ಟೀಕೆ ಟಿಪ್ಪಣಿ ಮಾಡಲಿ ನಾವು ಬೇಡ ಅಂತ ಹೇಳಲ್ಲ. ಸಲಹೆ ಬೇಕು ನೀಡಲಿ, ಸುಖಾ ಸುಮ್ಮನೆ ನಮ್ಮ ಪ್ರತಿಕ್ರಿಯೆ ಇರಲ್ಲ ಎಂದರು.
ಮತ್ತೊಂದು ಕಡೆ ಗ್ಯಾರಂಟಿ ಯೋಜನೆ ಅರೆಬೆಂದ ಯೋಜನೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವರು ಸಾವಿರಾರು ಕೋಟಿ ಜನರಿಗೆ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ ನೇರವಾಗಿ ಜನರಿಗೆ ನೀಡಿದ್ದೇವೆ. ನಮ್ಮ ರಾಜಕೀಯ ನಾಯಕರ ಸರ್ಟಿಫಿಕೇಟ್ ಬೇಕಾಗಿಲ್ಲ. ಜನಸಮುದಾಯ ಸರ್ಟಿಫಿಕೇಟ್ ನೀಡಿದೆ ಮುಂದೆಯೂ ನೀಡುತ್ತಾರೆ ಎಂದರು.
ತೆಲಂಗಾಣದಲ್ಲಿ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ ಜಮೀರ್ ಏನೂ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಾನು ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.