ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ಹಣ ಬಿಡುಗಡೆ ಮಾಡಿದೆ. ಈ ಸಂಬಂಧ ಕೇಂದ್ರದ ಹಣಕಾಸು ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟ ಪರಿಹಾರವೇ ಬೇರೆ. ಈಗ ಕೇಂದ್ರದಿಂದ ಬಿಡುಗಡೆಯಾಗಿದ್ದೆ ಬೇರೆ. ಕಳೆದ ಬಾರಿ ರಾಜ್ಯದಿಂದ ಕೇಂದ್ರಕ್ಕೆ ಮನವಿ ಹೋಗಿದ್ದು 18,174 ಕೋಟಿ ರೂಪಾಯಿ ಆಗಿತ್ತು. ಆದರೆ ರಾಜ್ಯ ಸರ್ಕಾರ ಎಷ್ಟೇ ಮನವಿ ಮಾಡಿದರು ಕೇಂದ್ರ ಸರ್ಕಾರದಿಂದ ಒಂದು ಪೈಸೆಯೂ ಹಣ ಬಂದಿರಲಿಲ್ಲ. ಸುಪ್ರೀಂ ಕೋರ್ಟ್ ನಿಂದ ಆದೇಶ ಹೊರ ಬೀಳುತ್ತಿದ್ದಂತೆ ಬರ ಪರಿಹಾರ ರಿಲೀಸ್ ಆಗಿದೆ. ಅದುವೆ 3,454 ಕೋಟಿ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿತ್ತು. ಹಿಂಗಾರು ಮಳೆ ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ಅದು ಕೂಡ ಕೈಕೊಟ್ಟಿತ್ತು. ಹೀಗಾಗಿ ರಾಜ್ಯದಲ್ಲಿ ಬರ ತಾಂಡವವಾಡುತ್ತಿತ್ತು. ಸಿಎಂ ಸಿದ್ದರಾಮಯ್ಯ ಅನೇಕ ಬಾರಿ ಪತ್ರ ಬರೆದರು ಪರಿಹಾರ ಇಲ್ಲ, ಮನವಿ ಮಾಡಿದರು ಪರಿಹಾರ ಬಂದಿರಲಿಲ್ಲ. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಎಷ್ಟು ಕೋಟಿ ಪರಿಹಾರ ಬರಬೇಕಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ದಾಖಲೆ ಸಮೇತ ಇಟ್ಟಿದ್ದರು. ಕಾಂಗ್ರೆಸ್ ನಾಯಕರು ಪ್ರತಿ ಭಾಷಣದಲ್ಲೂ ಇದೇ ವಿಚಾರಕ್ಕೆ ಕೇಂದ್ರ ಸರ್ಕಾರದ ಮೇಲೆ ಹರಿಹಾಯುತ್ತಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ಆದೇಶ ಹೊರ ಬಿದ್ದ ಮೇಲೆ ಸ್ವಲ್ಪ ಪರಿಹಾರ ಹಣವನ್ನು ರಿಲೀಸ್ ಮಾಡಿದೆ.