ಜನ ವಿರೋಧಿ ಪಕ್ಷಗಳನ್ನು ತಿರಸ್ಕರಿಸಿ, ಜನಪರ ಹೋರಾಟದ ದನಿ ಎತ್ತುವ ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷವನ್ನು ಬೆಂಬಲಿಸಿ : ಡಾ. ಜಿ.ಎಸ್. ಕುಮಾರ್

2 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.13 : ಜನತೆ ಎಲ್ಲಾ ಜನ ವಿರೋಧಿ ಪಕ್ಷಗಳನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ ಜನಪರ ಹೋರಾಟದ ದನಿಯನ್ನು ಸದನದಲ್ಲಿ ಎತ್ತುವ ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷವನ್ನು ಬೆಂಬಲಿಸಬೇಕು” ಎಂದು ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ರಾಜ್ಯ ಮುಖಂಡ ಡಾ. ಜಿ.ಎಸ್. ಕುಮಾರ್ ಕರೆ ನೀಡಿದರು.

ನಗರದ ಭಗತ್ ಸಿಂಗ್ ಪಾರ್ಕ್ ಬಳಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಸುಜಾತ. ಡಿ ಅವರ ಚುನಾವಣಾ ಪ್ರಚಾರ ವಾಹನ ಗ್ರಾಮೀಣ ಜಾಥವನ್ನು ಧ್ವಜ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

“ಹಣಬಲ, ತೋಳ್ಬಲ, ಜಾತಿ ಬಲಗಳೊಂದಿಗೆ ಧರ್ಮದ ಅಮಲಿನಲ್ಲಿ ಜನರನ್ನು ಮುಳುಗಿಸಲು ಯತ್ನಿಸುತ್ತಾ ಜನರ ಮುಂದೆ ಬರುತ್ತಿರುವ ಬಿಜೆಪಿ, ಕಾಂಗ್ರೆಸ್ ನಂತಹ ದೊಡ್ಡ ದೊಡ್ಡ ಪಕ್ಷಗಳ ನಿಲುವಿಗೆ ವಿರುದ್ಧವಾಗಿ ನೈಜ ಜನಪರ ವಿಚಾರಗಳನ್ನು ಕೈಗೆತ್ತಿಕೊಂಡು ಚುನಾವಣೆ ಎದುರಿಸುತ್ತಿರುವ ಎಸ್‍ಯುಸಿಐ(ಕಮ್ಯುನಿಸ್ಟ್ ) ಪಕ್ಷ ಈ ಚುನಾವಣಾ ಪ್ರಚಾರದ ಜಾಥವನ್ನು ಆರಂಭಿಸಿದೆ”. ಎಂದರು.

ಮುಂದುವರೆದು ಮಾತನಾಡಿದ ಅವರು “ಭಾರಿ ಭರವಸೆಯೊಂದಿಗೆ ಆಳ್ವಿಕೆಗೆ ಬಂದು ಕಳೆದ ಹತ್ತು ವರ್ಷಗಳಿಂದ ನಮ್ಮನಾಳುತ್ತಿರುವ ಬಿಜೆಪಿ ಸರ್ಕಾರ ತನ್ನೆಲ್ಲಾ ಭರವಸೆಗಳನ್ನು ಹುಸಿಗೊಳಿಸಿದೆ. ಸಾಲದೆಂಬಂತೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹರಣಗೊಳಿಸಿದೆ. ಕಾರ್ಮಿಕ ಹೋರಾಟಗಳಿಂದ ಗಳಿಸಿದ ನ್ಯಾಯಬದ್ಧ ಹಕ್ಕುಗಳನ್ನು ಕಿತ್ತುಕೊಂಡು ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿದೆ.

ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಹೇಳಿದ್ದ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಇಲ್ಲಸಲ್ಲದ ಪ್ರಯತ್ನ ಮಾಡಿದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯಗಳ ವ್ಯಾಪಾರೀಕರಣ ದೇಶದ ಜನತೆಯನ್ನು ಕಿತ್ತು ತಿನ್ನುತ್ತಿವೆ. ಆದ್ದರಿಂದ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡದೆ ಜಾತಿವಾದ ಕೋಮುವಾದದ ವಿಷವನ್ನು ಮುಂದಿಟ್ಟುಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ. ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೂ ಕೂಡ ಬಂಡವಾಳಶಾಹಿಗಳ ಸೇವೆ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂಬುದನ್ನು ಮರೆಯುವಂತಿಲ್ಲ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಸುಜಾತ. ಡಿ ಅವರು ಮಾತನಾಡಿ,  “ಇಂದು ದೊಡ್ಡ ರಾಜಕೀಯ ಪಕ್ಷಗಳಿಗೆ ದೇಶದ ಬಂಡವಾಳಿಗರ ಮತ್ತು ಉದ್ಯಮಪತಿಗಳ ಬೆಂಬಲವಿದೆ. ಅವರ ಬೆಂಬಲದಿಂದ ಗೆದ್ದು ಬರುವ ಇವರು ತಮ್ಮ ಆಡಳಿತದ ಅವಧಿಯಲ್ಲಿ ಅದಾನಿ, ಅಂಬಾನಿ, ಟಾಟಾ, ಬಿರ್ಲಾಗಳ ಸೇವೆಗೈಯ್ಯುತ್ತಾರೆಯೇ ಹೊರತು ಬಡಜನರ, ರೈತ ಕಾರ್ಮಿಕರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಆದ್ದರಿಂದ ಜನಪರ ಹೋರಾಟದ ನೈಜ ದನಿಯಾಗಿರುವ ಎಸ್‍ಯುಸಿಐ (ಕಮ್ಯುನಿಸ್ಟ್ ) ಪಕ್ಷವನ್ನು ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು” ಎಂದರು.

ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದು ಚಿತ್ರದುರ್ಗ ತಾಲ್ಲೂಕಿನ ಮೆದೆಹಳ್ಳಿ – ತಮಟಕಲ್ಲು- ಅಯ್ಯನಹಳ್ಳಿ- ಪಾಪೇನಹಳ್ಳಿ – ರಾಯಣ್ಣನ ಹಳ್ಳಿ – ಚಿಕ್ಕಪ್ಪನಹಳ್ಳಿ- ಮಾಡನಾಯಕನಹಳ್ಳಿ- ಚಿಕ್ಕಗೊಂಡನಹಳ್ಳಿ,- ಬಂಗಾರಕ್ಕನಹಳ್ಳಿ- ತುರುವನೂರು- ಮುಸ್ಟೂರು- ಕೂನಬೇವು – ಬೆಳಗಟ್ಟ- ಹಾಯ್ಕಲ್- ಹಂಪಣ್ಣನಮಾಳಿಗೆ – ಗೋನೂರು ಮೊದಲಾದ ಹಳ್ಳಿಗಳಲ್ಲಿ ಜಾಥಾ ಸಂಚರಿಸಿ ಜನರನ್ನು ಭೇಟಿ ಮಾಡುವ ಮೂಲಕ ಜನರಲ್ಲಿ ಮತ ಪ್ರಚಾರ ನಡೆಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *