ಶ್ರೀನಗರ: ಅಮರನಾಥಯಾತ್ರೆಗೆ ಹೋಗಬೇಕೆಂಬುದು ಹಲವರ ಕನಸಾಗಿರುತ್ತೆ. ಇನ್ನು ಕೆಲವರು ಪ್ರತಿ ವರ್ಷವೂ ಅಮರನಾಥ ಯಾತ್ರೆ ಮಾಡುತ್ತಿರುತ್ತಾರೆ. ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದಾದ ಬಳಿಕ ಭದ್ರತೆಯ ದೃಷ್ಟಿಯಿಂದ ಯಾತ್ರೆ ನಡೆದಿದರಲಿಲ್ಲ. ಬಳಿಕ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಯಾತ್ರೆ ಹೋಗಲಾಗಿರಲಿಲ್ಲ. ಇದೀಗ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಕಳೆದ ಮೂರು ವರ್ಷಗಳಿಂದ ರದ್ದಾಗಿದ್ದ ಯಾತ್ರೆ ಈಗ ಪ್ರಾರಂಭವಾಗಿದೆ.
ಏಪ್ರಿಲ್ 11 ರಿಂದ ಅಮರನಾಥ ಯಾತ್ರೆಗೆ ಹೋಗಬೇಕೆಂದುಕೊಂಡಿರುವವರು ನೋಂದಣಿ ಮಾಡಿಕೊಳ್ಳಬಹುದು ಎಂದು ಅಮರನಾಥದ ಸಿಇಓ ನಿತೀಶ್ವರ್ ಕುಮಾರ್ ತಿಳಿಸಿದ್ದಾರೆ. ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಜೂನ್ 30ರಿಂದ ಆಗಸ್ಟ್ 11ರ ತನಕ ಯಾತ್ರೆ ನಡೆಯಲಿದೆ. ಶ್ರೈನ್ ಬೋರ್ಡ್ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಇನ್ನು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ 3 ಸಾವಿರ ಜನ ಉಳಿದುಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗಿದೆ.