ಚಿತ್ರದುರ್ಗ,(ಮೇ.11) : ಸಾರಿಗೆ ಇಲಾಖೆಯಲ್ಲಿ 32 ವರ್ಷಗಳ ಸೇವಾವಧಿ ತೃಪ್ತಿ ತಂದಿದೆ. ನನ್ನ ಅಧಿಕಾರದ ಅವಧಿಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ ತಿಳಿಸಿದರು.
ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ. ಸೇವಾವಧಿಯಲ್ಲಿ ಜನರ ಸೇವೆ ಮಾಡಿದಂತಹ ಆತ್ಮ ತೃಪ್ತಿ ನನಗಿದೆ. ನಿವೃತ್ತಿ ನಂತರವೂ ನಾನು ಸಾರಿಗೆ ಇಲಾಖೆಯ ಸುಧಾರಣಾ ಸಮಿತಿಯಲ್ಲಿ ಕಾರ್ಯ ನಿರ್ವಸುತ್ತಿದ್ದೇನೆ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಗಿಡ, ಮರ ಬೆಳೆಸುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಮೋಟಾರ್ ನಿರೀಕ್ಷಕರಾದ ಕರುಣಾಕರ್ ಅವರು ಎಆರ್‍ಟಿಒ ಆಗಿ ಪದೋನ್ನತಿ ಹೊಂದಿ ವರ್ಗಾವಣೆ ಹಿನ್ನಲೆಯಲ್ಲಿ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್, ನಿವೃತ್ತ ಉಪ ಸಾರಿಗೆ ಆಯುಕ್ತ ರುದ್ರ ನಾಯಕ, ಮೋಟಾರು ವಾಹನ ನಿರೀಕ್ಷಕ ನಾಗಭೂಷಣ್ ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಇದ್ದರು.