ರಾಜ್ಯಕ್ಕೆ ಅಕ್ಕಿ ಪೂರೈಕೆಗೆ ನಿರಾಕರಣೆ : ಚಿತ್ರದುರ್ಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಚಿತ್ರದುರ್ಗ, (ಜೂ.20) : ಹದಿನೆಂಟು ದೇಶಗಳಿಗೆ ಹದಿನೆಂಟು ಲಕ್ಷ ಟನ್ ಆಹಾರ ಸರಬರಾಜು ಮಾಡುವಷ್ಟು ಆಹಾರ ದಾಸ್ತಾನು ಇದ್ದರು ಕರ್ನಾಟಕ ರಾಜ್ಯಕ್ಕೆ ಅಕ್ಕಿ ಪೂರೈಸಲು ದಾಸ್ತಾನಿಲ್ಲ ಎಂದು ಫುಡ್ ಕಾರ್ಪೊರೇಷನ್ ಹೇಳುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ಜಿಲ್ಲಾಧಿಕಾರಿ ಕಚೇರಿ ಪತ್ರಾಂಕಿತ ಸಹಾಯಕರ ಮೂಲಕ ಮಂಗಳವಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಬಡವರಿಗೆ ಹೆಚ್ಚುವರಿಯಾಗಿ 1.66 ಲಕ್ಷ ಟನ್ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 34 ರೂ.ನಂತೆ ನೀಡುವಂತೆ ರಾಜ್ಯ ಸರ್ಕಾರ ಕೇಳುತ್ತಿದ್ದರು ದಾಸ್ತಾನಿಲ್ಲ ಎಂದು ಕೇಂದ್ರ ಹೇಳುತ್ತಿರುವುದು ಯಾವ ನ್ಯಾಯ? ಬಡವರು ತಿನ್ನೊ ಅಕ್ಕಿಗೆ ಮೋದಿ ಸರ್ಕಾರ ನಿಗಧಿ ಮಾಡಿರೋ ಬೆಲೆ ಒಂದು ಕೆ.ಜಿ.ಗೆ 34 ರೂ. ಅದೇ ಎಥೆನಾಲ್ ತಯಾರಿಸಲು ಒಂದು ಕೆ.ಜಿ.ಗೆ 24 ರೂ.ಗಳ ವೆಚ್ಚವಾಗಲಿದೆ. ಖಾಸಗಿ ಕಂಪನಿಗಳು ಎಥೆನಾಲ್ ತಯಾರಿಸಲು ರೂ.24 ರ ದರದಲ್ಲಿ ನಿಗಧಿಗಿಂತ ಹೆಚ್ಚುವರಿಯಾಗಿ ಅಕ್ಕಿ ಕೊಳ್ಳಬಹುದು ಎಂದು ಅಖಿಲ ಭಾರತ ಕಿಸಾನ್ ಸಭಾದವರು ವಿವರಿಸಿದರು.

ನವದೆಹಲಿಯಲ್ಲಿ ವರ್ಷಾನುಗಟ್ಟಲೆ ರೈತ ವಿರೋಧಿ ಕಾಯಿದೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸಿದ ಧರಣಿಗೆ ಮಣಿದು ಕೇಂದ್ರ ಸರ್ಕಾರವೇ ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆದಿರುವಾಗ ರಾಜ್ಯ ಸರ್ಕಾರ ಏಕೆ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುತ್ತಿಲ್ಲ. ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಸಬೇಕು. ಜೀವನಕ್ಕಾಗಿ ತುಂಡು ಭೂಮಿಗಳನ್ನು ಉಳುಮೆ ಮಾಡುತ್ತಿರುವ ಭೂಹೀನರಿಗೆ ಸಾಗುವಳಿ ಹಕ್ಕುಪತ್ರ ಕೊಡಬೇಕು. ಟೊಮೆಟೋ, ಈರುಳ್ಳಿ ಇನ್ನಿತರೆ ತೋಟಗಾರಿಕೆ ಬೆಳೆಗಳ ದರ ಕುಸಿದಿರುವುದರಿಂದ ಅವುಗಳ ಶೇಖರಣೆಗಾಗಿ ಸ್ಥಳೀಯವಾಗಿ ಶೀಥಲ ಗೃಹ ಉಗ್ರಾಣಗಳನ್ನು ನಿರ್ಮಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಇದೆ ಸಂದರ್ಭದಲ್ಲಿ ಒತ್ತಾಯಿಸಿದ ಅಖಿಲ ಭಾರತ ಕಿಸಾನ್ ಸಭಾದವರು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೂ ಮನವಿಯನ್ನು ಜಿಲ್ಲಾಡಳಿತದ ಮೂಲಕ ಸಮರ್ಪಿಸಿದರು.

ಕಿಸಾನ್‍ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಜಿಲ್ಲಾ ಉಪಾಧ್ಯಕ್ಷ ಕಾಂ.ಎಂ.ಬಿ. ಜಯದೇವಮೂರ್ತಿ, ತಾಲ್ಲೂಕು ಸಂಚಾಲಕ ಕಾಂ. ಸತ್ಯಕೀರ್ತಿ, ಕಾಂ.ಎಸ್.ಬಾಬು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *