ಸಿಜೇರಿಯನ್ ಹೆರಿಗೆ ಪ್ರಮಾಣ ತಗ್ಗಿಸಿ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

2 Min Read

 

ಚಿತ್ರದುರ್ಗ,(ಜುಲೈ.01): ಸಿಜೇರಿಯನ್ ಹೆರಿಗೆ ಪ್ರಮಾಣವು ಎಲ್ಲಾ ಜಿಲ್ಲೆಗಳಿಗಿಂತ ಚಿತ್ರದುರ್ಗ ಜಿಲ್ಲೆಯಲ್ಲೇ ಅತ್ಯಧಿಕವಾಗಿದೆ. ಕೂಡಲೇ ಕಡಿಮೆಗೊಳಿಸಲು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವೈದ್ಯಾಧಿಕಾರಿಗಳಿಗೆ ಜರುಗಿದ ಸಿಜೇರಿಯನ್ ಹೆರಿಗೆ ಹೆಚ್ಚಳ ಕುರಿತು ಪ್ರಗತಿ ಪರಿಶೀಲನೆ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟಾರೆ ಶೇ. 55ರಷ್ಟಿದ್ದು, ಇದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.48 ಇದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಶೇಕಡ 78 ಇರುತ್ತದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡಿಸದೇ ಸಾಧ್ಯವಾದಷ್ಟು ಸಹಜ ಹೆರಿಗೆ ಮಾಡಿಸಲು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ ಮಾತನಾಡಿ,  ಖಾಸಗಿ ಆಸ್ಪತ್ರೆಗಳ ಕಳೆದ 10 ವರ್ಷಗಳ ವರದಿಯನ್ನು ಪರಿಶೀಲಿಸಿದಾಗ ವರ್ಷದಿಂದ ವರ್ಷಕ್ಕೆ ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗಿದ್ದು, ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುತ್ತಿರುವುದು ತಮ್ಮ ವರದಿಯಲ್ಲಿ ಸ್ಪಷ್ಟವಾಗಿದೆ. ಫಲಾನುಭವಿಗಳಿಗೆ ಮತ್ತು ಫಲಾನುಭವಿಗಳ ಸಂಬಂಧಿಕರಿಗೆ ಮನವೊಲಿಸಿ ಸಹಜ ಹೆರಿಗೆ ಮಾಡಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ರಂಗನಾಥ್ ಮಾತನಾಡಿ,  ಪ್ರತಿ ಆಸ್ಪತ್ರೆಯಿಂದ ಎಲ್ಲಾ ಕೇಸ್‍ಗಳನ್ನು ಆಡಿಟ್ ಮಾಡಿ, ವಿಶ್ಲೇಷಣೆಯೊಂದಿಗೆ ಅನಗತ್ಯ ಕಾರಣಗಳನ್ನು ಕ್ರೂಢೀಕರಿಸಿ ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಕಡಿಮೆಗೊಳಿಸಲು ಕೈಜೋಡಿಸುವಂತೆ ತಿಳಿಸಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ ಕೆಳಹಂತದ ಆಸ್ಪತ್ರೆಗಳಿಂದ  ಮೇಲ್ಮಟ್ಟದ ಆಸ್ಪತ್ರೆಗಳಿಗೆ ಅನಗತ್ಯವಾಗಿ ಹೆರಿಗೆ ಕೇಸ್‍ಗಳನ್ನು ರೆಫರ್ ಮಾಡದೇ ತಮ್ಮ ಆಸ್ಪತ್ರೆಯಲ್ಲಿಯೆ ಹೆರಿಗೆ ಮಾಡಿಸುವುದರಿಂದ ಮೇಲ್ಮಟ್ಟದ ಆಸ್ಪತ್ರೆಗಳ ಹೊರೆ ಕಡಿಮೆ ಮಾಡುವುದರ ಜೊತೆಗೆ ಸಿಜೇರಿಯನ್ ಹೆರಿಗೆ ಕಡಿಮೆಗೊಳಸಬಹುದು ಎಂದು ತಿಳಿಸಿದರು.

ಡಬ್ಲ್ಯೂ.ಹೆಚ್.ಒ ವಿಭಾಗೀಯ ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ ಜಿಲ್ಲೆಯಲ್ಲಿ ಯಾವ ಮಗುವು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು.

ನಿವಾಸಿ ವೈದ್ಯಾಧಿಕಾರಿಗಳು ಜಿಲ್ಲಾ ಅಸ್ಪತ್ರೆ, ವೈದ್ಯಕೀಯ ಅಧೀಕ್ಷಕರು ಬಸವೇಶ್ವರ ಮೆಡಿಕಲ್ ಕಾಲೇಜ್, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಎಲ್ಲಾ 24ಘಿ7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *