ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ18) : ಜಿಲ್ಲೆಯ ಎಲ್ಲಾ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಸರ್ಕಾರದ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವದಂತಿಗಳನ್ನು ನಂಬದೆ, ರೂ.10/-ರ ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಿ, ಚಲಾವಣೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು 10 ರೂ. ಗಳ ನಾಣ್ಯಗಳನ್ನು ಬಸ್‍ಗಳಲ್ಲಿ ಪ್ರಯಾಣಿಕರಿಂದ ಸ್ವೀಕರಿಸುತ್ತಿಲ್ಲ, ಈ ಕುರಿತು ಕ್ರಮ ಜರುಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಮಹಾಪ್ರಬಂಧಕರು, ಕಳೆದ ತಿಂಗಳು ಜರುಗಿದ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿಯ ಸ್ಟೀರಿಂಗ್ ಸಮಿತಿ ಸಭೆಯಲ್ಲಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ) ಸರ್ಕಾರದ ಕಾರ್ಯದರ್ಶಿ ಏಕ್‍ರೂಪ್ ಕೌರ್ ಅವರು 10 ರೂ. ನಾಣ್ಯವನ್ನು ಎಲ್ಲರೂ ಸ್ವೀಕರಿಸಿ, ಚಲಾವಣೆಗೊಳಿಸಲು ಜಾಗೃತಿ ಮೂಡಿಸುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
ಇದರನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ 10 ರೂ. ಗಳ ನಾಣ್ಯವನ್ನು ಸಾರ್ವಜನಿಕರಿಂದ ಸ್ವೀಕರಿಸಬೇಕು ಹಾಗೂ ಚಲಾವಣೆಗೊಳಿಸಬೇಕು.
ಅಲ್ಲದೆ ಎಲ್ಲಾ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರದ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ತಮ್ಮ ಅನುಮಾನಗಳನ್ನು ಬದಿಗಿಟ್ಟು, ರೂ.10/-ರ ಮುಖಬೆಲೆಯ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಹಾಗೂ ಚಲಾವಣೆಗೊಳಿಸಬೇಕು.
ರೂ.10/-ರ ನಾಣ್ಯ ಚಲಾವಣೆ ಬಗ್ಗೆ ಯಾವುದೇ ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ರಿಸರ್ವ್ ಬ್ಯಾಂಕ್ ಮನವಿ ಮಾಡಿದ್ದು, ಯಾವುದೇ ಹಿಂಜರಿಕೆಯಿಲ್ಲದೇ ತಮ್ಮ ಎಲ್ಲಾ ವಹಿವಾಟುಗಳಲ್ಲಿ ರೂ.10/-ರ ನಾಣ್ಯವನ್ನು ಕಾನೂನುಬದ್ಧವಾಗಿ ಸ್ವೀಕರಿಸುವುದನ್ನು ಮುಂದುವರೆಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ತಿಳಿಸಿದ್ದಾರೆ.