ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸ್ವಾತಂತ್ರ್ಯ, ಸಮಾನತೆಯ ಆಧಾರದ ಮೇಲೆ ಭದ್ರವಾದ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದು ಚಳ್ಳಕೆರೆಯ ಶ್ರೀಮತಿ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ ಪೋತೆ ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ ವತಿಯಿಂದ ರೋಟರಿ ಬಾಲಭವನದಲ್ಲಿ ಬುಧವಾರ ನಡೆದ ಭಾರತ ಸಂವಿಧಾನ ಅಂಗಿಕಾರವಾದ ದಿನ ಉದ್ದೇಶಿಸಿ ಮಾತನಾಡಿದರು.
ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಓದಿ ತಿಳಿದುಕೊಂಡಾಗ ಮಾತ್ರ ಫಲವತ್ತಾದ ದೇಶ ಕಟ್ಟಬಹುದು. ಸಂವಿಧಾನಕ್ಕಿಂತ ಶ್ರೇಷ್ಟವಾದುದು ಯಾವುದೂ ಇಲ್ಲ. ಸಾಮಾನ್ಯ ಪ್ರಜೆಗಳು ದೇಶ ಆಳಬಹುದು ಎನ್ನುವ ಶಕ್ತಿಯನ್ನು ಸಂವಿಧಾನ ನೀಡಿದೆ. ಸಂವಿಧಾನದ ಆಚರಣೆ ಮೂಲಕ ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದು ಹಾಕಬಹುದು.
ಸಂವಿಧಾನದ ಓದು ಜ್ಞಾನ ನೀಡುವ ಗಣಿ ಎಂದು ಸಂವಿಧಾನದ ಮಹತ್ವ ತಿಳಿಸಿದರು.
ಸಂವಿಧಾನ ರಚನೆಗೂ ಮುನ್ನ ಎಂಟು ಸಾವಿರ ಪುಟಗಳ ಚರ್ಚೆಯಾಗುತ್ತದೆ. 395 ಅನುಚ್ಚೇದಗಳಿವೆ. 1949 ನ. 26 ರಂದು ಸಂವಿಧಾನ ಅಂಗೀಕಾರವಾದ ದಿನ. ಸಂವಿಧಾನವನ್ನು ಎಲ್ಲರೂ ಅರ್ಥಮಾಡಿಕೊಂಡಾಗ ಮಾತ್ರ ತುಳಿತಕ್ಕೊಳಗಾದವರು, ಶೋಷಿತರು, ಹಿಂದುಳಿದವರನ್ನು ಮೇಲಕ್ಕೆತ್ತಬಹುದು. ಸಂವಿಧಾನದ ಆಶಯ ಯಾವುದೇ ಒಂದು ಜಾತಿ, ಧರ್ಮದ ಪರವಲ್ಲ. ಎಲ್ಲರಿಗೂ ಸಮಾನತೆಯನ್ನು ನೀಡಿದೆ. ಪ್ರತಿಯೊಬ್ಬ ನಾಗರೀಕನ ಆತ್ಮಗೌರವವನ್ನು ಸಂವಿಧಾನ ಎತ್ತಿ ಹಿಡಿಯುತ್ತಿದೆ. ಪ್ರಜಾಪ್ರುಭತ್ವದ ಮೂಲ ಪರಿಕಲ್ಪನೆ ಬುದ್ದನದಾಗಿದೆ. ಹಾಗಾಗಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಬೌದ್ದ ಧರ್ಮಕ್ಕೆ ಸೇರ್ಪಡೆಯಾದರು ಎಂದು ಹೇಳಿದರು.
ನಮಗೆ ನಾವೇ ಸಂವಿಧಾನವನ್ನು ಅರ್ಪಿಸಿಕೊಂಡಿರುವುದರಿಂದ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆ ಅಳವಡಿಸಿಕೊಂಡಿದ್ದೇವೆ. ದೇಶವನ್ನು ಯಾವುದೇ ಧರ್ಮ, ದೇವತೆಗಳು ಆಳುವುದಿಲ್ಲ. ಸ್ವತಂತ್ರ ಭಾರತ ಸಂವಿಧಾನ ರಚಿಸುವ ಕಾರ್ಯವು 1946 ಡಿಸೆಂಬರ್ 9 ರಿಂದ ಆರಂಭಗೊಂಡು 296 ಸದಸ್ಯರನ್ನು ಹೊಂದಿತ್ತು. ಸಂವಿಧಾನ ರಚಿಸಲು ಎರಡು ವರ್ಷ, ಹನ್ನೊಂದು ತಿಂಗಳು, 17 ದಿನಗಳು ಬೇಕಾಯಿತು. ಅಂಗೀಕಾರಕ್ಕಾಗಿ 165 ದಿನಗಳ ಕಾಲ ಚರ್ಚಿಸಲಾಯಿತು ಎಂದರು.
ರೋಟರಿ ಕ್ಲಬ್ ಚಿತ್ರದುರ್ಗದ ಅಧ್ಯಕ್ಷ ರೊ. ಪಿ.ಹೆಚ್.ಎಫ್. ಬಿ.ಎಸ್.ಕನಕರಾಜ್, ಜಂಟಿ ಕಾರ್ಯದರ್ಶಿ ವಿಶ್ವನಾಥ್ ವೇದಿಕೆಯಲ್ಲಿದ್ದರು.
ಎಸ್.ವೀರೇಶ್, ಎಂ.ಸಿ.ವೆಂಕಟೇಶ್, ವಿಶ್ವನಾಥಬಾಬು, ಮಧುಪ್ರಸಾದ್, ಮೈಲೇಶ್, ಹೆಗ್ಗನಗೌಡ್ರು, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಶಂಕರಪ್ಪ, ಕುರುಬರಹಳ್ಳಿ ಶಿವಣ್ಣ, ಎಸ್.ಎನ್.ರವಿಕುಮಾರ್, ಪ್ರೀತಿ ಕನಕರಾಜ್, ಸರಸ್ವತಿ ವೆಂಕಟೇಶ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.