ಬೆಂಗಳೂರು; ಇಂದು ಇಡೀ ಚಿಕ್ಕಮಗಳೂರು ಮಂದಿ ಸುಪ್ರೀಂ ತೀರ್ಪಿಗಾಗಿ ಕಾಯುತ್ತಿದ್ದಾರೆ. ಚಿಕ್ಕಮಗಳೂರು ಪರಿಷತ್ ನ ಮರು ಮತ ಎಣಿಕೆ ಸುಪ್ರೀಂ ಅಂಗಳ ತಲುಪಿದೆ. ಇಂದು ಆ ಸಂಬಂಧ ಮಹತ್ವದ ತೀರ್ಪು ಹೊರ ಬರಲಿದೆ. ಹೀಗಾಗಿ ಎಲ್ಲರೂ ಸುಪ್ರೀಂ ಕೋರ್ಟ್ ಕೊಡುವ ತೀರ್ಪಿನ ಕಡೆಗೆ ಗಮನ ಹರಿಸಿದ್ದಾರೆ. ಮೂರು ವರ್ಷಗಳ ಬಳಿಕ ಎಂಎಲ್ಸಿ ಚುನಾವಣೆಯ ಮರು ಎಣಿಕೆ ಮುಗಿದಾಗಿತ್ತು. ನಿನ್ನೆ ಈ ಮರು ಎಣಿಕೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ತಲುಪಿದೆ.

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ನಡೆದಿದ್ದ ಚುನಾವಣೆಯ ಮರು ಮತ ಎಣಿಕೆ ಫಲಿತಾಂಶ ಇಂದು ಹೊರ ಬೀಳಲಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಫೆಬ್ರವರಿ 28ರಂದು ಮರು ಮತ ಎಣಿಕೆ ಕಾರ್ಯ ನಡೆದಿತ್ತು. ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ನಡೆಸುತ್ತಿದ್ದ ಹೋರಾಟಕ್ಕೆ ಇಂದು ಜಯ ಸಿಗುವ ನಿರೀಕ್ಷೆ ಇದೆ. ಸುಪ್ರೀಂ ನಿಂದ ತೀರ್ಪಂತು ಹೊರಬೀಳಲಿದ್ದು, ಯಾರಿಗೆ ಗೆಲುವು ಸಿಗಲಿದೆ, ಯಾರೂ ಸೋಲಲಿದ್ದಾರೆ ಅನ್ನೋದಂತು ತಿಳಿಯಲಿದೆ.

ಅಷ್ಟಕ್ಕೂ ಮರು ಮತ ಎಣಿಕೆಯಾಗಲು ಕಾರಣವೇನು..? ಸುಪ್ರೀಂ ಅಂಗಳ ತಲುಪುವುದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ, 2021 ರ ಡಿಸೆಂಬರ್ 10 ರಂದು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಗೆ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್ ನ ಎ.ವಿ.ಗಾಯತ್ರಿ ಶಾಂತೇಗೌಡ ವಿರುದ್ಧ ಎಂ.ಕೆ.ಪ್ರಾಣೇಶ್ ಕೇವಲ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಪರಿಷತ್ ಗೆ ಪ್ರವೇಶ ಪಡೆದಿದ್ದರು. ಆದರೆ ಇದರಲ್ಲಿ 12 ಜನ ನಾಮನಿರ್ದೇಶಿತರು ಮತ ಚಲಾಯಿಸಿದ್ದರು. ನಾಮನಿರ್ದೇಶಿತರ ಮತದಾನ ಪ್ರಶ್ನಿಸಿ ಗಾಯತ್ರಿ ಕೋರ್ಟ್ ಮೆಟ್ಟೇರಿದ್ದರು. ಕೋರ್ಟ್ ಮರುಮತದಾನಕ್ಕೆ ಆದೇಶ ನೀಡಿತ್ತು.

