ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜನವರಿ. 19 :ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಜಾಲವೊಂದು ಚಳ್ಳಕೆರೆಯಲ್ಲಿ ಪತ್ತೆಯಾಗಿದೆ.
ನಗರದ ಪಾವಗಡ ರಸ್ತೆಯ 3 ಕ್ರಾಸ್ ಬಳಿ ಇರುವ ಶೆಡ್ ನಲ್ಲಿ ಎಗ್ಗಿಲ್ಲದೆ ಅಕ್ರಮ ಪಡಿತರ ಅಕ್ಕಿ ವ್ಯಾಪಾರ ನಡೆಯುತ್ತಿದೆ. ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕೆಲವರು ಕಾಳ ಸಂತ್ಯೆಯಲ್ಲಿ ಖರೀದಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ವಿಡಿಯೋ ಕೂಡಾ ವೈರಲ್ ಆಗಿದೆ.
ಸರ್ಕಾರದ ಉಚಿತ ಅಕ್ಕಿಯನ್ನು ಸಾರ್ವಜನಿಕರಿಂದ ಪ್ರತಿ ಕೆಜಿ ಅಕ್ಕಿಗೆ 16 ರೂ. ದರದಂತೆ ಹಣ ನೀಡಿ ಪಡಿತರ ಅಕ್ಕಿ ಖರೀದಿ ಮಾಡಲಾಗುತ್ತಿದ್ದು, ಅಕ್ಕಿ ಪಾಲಿಶ್ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮ ವ್ಯವಹಾರವನ್ನು ತಡೆಗಟ್ಟಲು ಆಹಾರ ಇಲಾಖೆ & ಪೊಲೀಸ್ ಇಲಾಖೆ ಏನು ಮಾಡುತ್ತಿವೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾಳ ಸಂತೆಯಲ್ಲಿ ಅಕ್ಕಿ ಕೊಂಡುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

















