ಚಿತ್ರದುರ್ಗ. ಡಿ.14: ವಿವಿಧ ಕಾರಣಗಳಿಂದ ದೂರವಾಗಿದ್ದ ಮೂವರು ದಂಪತಿಗಳು ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಒಂದಾದರು.
ವೈವಾಹಿಕ ಜೀವನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯದಲ್ಲಿ ಒಂದು ಪ್ರಕರಣ ಮತ್ತು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿನ ಎರಡು ಪ್ರಕರಣದ ಮಾಹಿತಿ ಪಡೆದ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಅವರು ಆ ಜೋಡಿಗಳೊಂದಿಗೆ ಮಾತನಾಡಿ ಯಾವ ಕಾರಣಕ್ಕೆ ದೂರವಿದ್ದೀರಾ, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಿ, ಮಕ್ಕಳ ಭವಿಷ್ಯದ ಕುರಿತು ಮನವರಿಕೆ ಮಾಡಿ, ಮನವೊಲಿಸುವ ಮೂಲಕ ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸುಖಾಂತ್ಯಗೊಳಿಸಿದರು.
ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಅವರ ಸಮ್ಮುಖದಲ್ಲಿ ಸೊಂಡೆಕೊಳ ಗ್ರಾಮದ ಕರುಣಾಸಾಗರ್ ಹಾಗೂ ಲತಾ ದಂಪತಿ, ಹಿರಿಯೂರು ನಗರದ ಮಹಾಲಿಂಗರಾಜು ಹಾಗೂ ಪ್ರತಿಭಾ ದಂಪತಿ, ಚಿಕ್ಕಂದವಾಡಿ ಗ್ರಾಮದ ಸ್ವಾಮಿ ಹಾಗೂ ಪ್ರತಿಭಾ ಅವರು ಮುನಿಸು ಮರೆತು ಪರಸ್ಪರ ಹೂ ಮಾಲೆ ಬದಲಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಮತ್ತೆ ಜತೆಯಾಗಿ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ, ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದಲ್ಲಿ 3 ಪ್ರಕರಣ ಹಾಗೂ ಜಿಲ್ಲೆ ವಿವಿಧ ನ್ಯಾಯಾಲಯಗಳಿಂದ 7 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಕ್ರಮವಹಿಸಲಾಗಿದ್ದು, ಇದಕ್ಕೆ ಕಕ್ಷಿದಾರರು, ವಕೀಲರ ಸಂಘದವರು ಸಹ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಈ ಬಾರಿಯ ಲೋಕ್ ಅದಾಲತ್ ನಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದ್ದು, ಕಳೆದ ಬಾರಿಯ ಲೋಕ್ ಅದಾಲತ್ ಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಎಂ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಲೋಕ್ ಅದಾಲತ್ ನಲ್ಲಿ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.