ಬೆಳಗಾವಿ: ಸಿಡಿ ಕೇಸ್ ನಿಂದಾಗಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಬಳಿಕ ಕೇಸ್ ನಿಂದ ಕ್ಲೀನ್ ಚಿಟ್ ಕೊಟ್ಟ ಬಳಿಕ ಮೊದಲು ಸಚಿವ ಸ್ಥಾನ ಮರಳಿ ಪಡೆಯಲು ಸಾಕಷ್ಟು ಶ್ರಮ ಪಟ್ಟರು. ಆದರೆ ಅದು ಕೂಡ ಸಾಧ್ಯವಾಗಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದೇ ಸಿಡಿ ಕೇಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿ ಟಾರ್ಗೆಟ್ ಮಾಡಿದ್ದಾರೆ.
ಇತ್ತಿಚೆಗೆ ಸುದ್ದಿಗೋಷ್ಟಿಯನ್ನು ನಡೆಸಿದ್ದ ರಮೇಶ್ ಜಾರಕಿಹೊಳಿ, ನಾನು ಸುಮ್ಮನೆ ಕೂತಿರಲಿಲ್ಲ. ಅವರು ಸಮಯ ನೋಡಿ ಹೊಡೆದಂತೆ ನಾನು ಸಮಯಕ್ಕಾಗಿ ಕಾಯುತ್ತಿದ್ದೆ ಎಂದಿದ್ದಾರೆ. ಇದೇ ವೇಳೆ ಸಿಡಿ ಕೇಸನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಮತ್ತೆ ಅದೇ ಪ್ರಯತ್ನ ಮಾಡುತ್ತಿದ್ದಾರೆ.
ಭಾನುವಾರ ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಹೊರಡಲಿದ್ದಾರೆ. ಈ ಮೂಲಕ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಹೇಗಾದರೂ ಮಾಡಿ ಸಿಡಿ ಕೇಸನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಲಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ಸಿಎಂ ಜೊತೆಗೆ ದೆಹಲಿಗೆ ತೆರಳಿದ್ದಾರೆ. ಈ ಮೂಲಕ ಸಿಡೊ ಕೇಸನ್ನು ಮುಂದುವರೆಸಲು ಪಣ ತೊಟ್ಟಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾ ನೇರ ಸ್ಪರ್ಧೆ ಇದೆ. ಹೀಗಾಗಿ ಕಾಂಗ್ರೆಸ್ ಈ ಬಾರಿ ಅಧಿಕಾರ ಹಿಡಿಯಲು ಸತತ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸೋಲಿಸುವುದಕ್ಕೆ ಸಿಬಿಐಗೆ ವಹಿಸುವುದು ಕೂಡ ಮುಖ್ಯ ಎನ್ನಲಾಗುತ್ತಿದೆ. ಡಿಕೆಶಿಯನ್ನು ಟಾರ್ಗೆಟ್ ಮಾಡಲೆಂದೆ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ. ಡಿಕೆ ಶಿವಕುಮಾರ್ ರಾಜಕೀಯ ಅಂತ್ಯ ನನ್ನಿಂದಾನೆ ಎಂದು ರಮೇಶ್ ಜಾರಕಿಹೊಳಿ ಗುಡುಗಿದ್ದರು. ಅದಕ್ಕಾಗಿಯೇ ಈ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.