ಬೆಂಗಳೂರು: ಇಂದು ನಾಡಿನೆಲ್ಲೆಡೆ ಸಂಭ್ರಮ – ಸಡಗರದ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇದರ ನಡುವೆ ರಾಜಕೀಯ ಬೆಳವಣಿಗೆಯೂ ನಡೆದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇತ್ತಿಚೆಗಷ್ಟೇ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೀಗಾಗಿ ಬೇಟಿಯಾದ ಬಳಿಕ ರಮೇಶ್ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರ ಆರೋಗ್ಯವನ್ನು ವಿಚಾರಸಿದ್ದಾರೆ. ಗೌರಿ ಗಣೇಶ ಹಬ್ಬವಾದ ಹಿನ್ನೆಲೆ ಇಬ್ಬರು ನಾಯಕರು ಶುಭಾಶಯ ಕೂಡ ಕೋರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಭೇಟಿ ಚರ್ಚೆ ಹುಟ್ಟು ಹಾಕಿದೆ. ನಂತರ ಮಾತನಾಡಿದ ರಮೇಶ್ ಜಾರಕಿಹೊಳಿ, ಕುಮಾರಸ್ವಾಮಿ ಅವರ ಆರೋಗ್ಯವನ್ನು ವಿಚಾರಿಸಲು ಬಂದಿದ್ದೆ. ಅವರು ಸದಾ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಒಳ್ಳೆಯದ್ದು. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿ ಇತ್ತು. ಆದರೆ ಅದನ್ನು ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವುದರಲ್ಲಿ ರಮೇಶದ ಜಾರಕಿಹೊಳಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು, ಎಲ್ಲರ ಗಮನ ಸೆಳೆದಿದೆ.