ರಿಲೀಸ್ ಆಯ್ತು ರಮೇಶ್ ಅರವಿಂದ್ ನಿರ್ದೇಶನದ ‘100’ ಟ್ರೇಲರ್

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಅಂಕಿಗಳ ಶೀರ್ಷಿಕೆ ಇಟ್ಟು ಥಿಯೇಟರ್‌ನತ್ತ ಪ್ರೇಕ್ಷಕರನ್ನು ಸೆಳೆಯುತ್ತಿರೋದು ಇದೇ ಹೊಸದೇನಲ್ಲ.  ಇದೇ ಪ್ರಯತ್ನದಲ್ಲಿ ಸ್ಯಾಂಡಲ್ ವುಡ್ ಪಾಲಿನ ಫ್ಯಾಮಿಲಿ ಶೋ  ಮ್ಯಾನ್  ರಮೇಶ್‌ ಅರವಿಂದ್‌  ಅವರೇ ಆಕ್ಷನ್ ಕಟ್ ಹೇಳೋದ್ರ  ಜೊತೆ ಅಭಿನಯಿಸ್ತಿರೋ   ‘100’ ಎಂಬ ಶೀರ್ಷಿಕೆ ಹೊತ್ತ ಸಿನೆಮಾ ಈಗಾಗಲೇ ಹಲವು ಕಾರಣದಿಂದಾಗಿ ಸುದ್ದಿ ಮಾಡ್ತಾನೇ ಇದೆ.

ಚಿತ್ರೀಕರಣವನ್ನ ಕಂಪ್ಲೀಟ್ ಮಾಡಿ, ನವೆಂಬರ್  19 ರಂದು ರಿಲೀಸ್ ಗೆ ರೆಡಿಯಾಗಿರೋ  100 ನಿಂದ ಟ್ರೈಲರ್ ಹೊರಬಿದ್ದಿದೆ. ಹೌದು, ರಮೇಶ್ ಅರವಿಂದ್  ನಿರ್ದೇಶಿಸಿ, ನಟಿಸಿರೋ  ‘100’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.
ಚಿತ್ರದ ಮೂಲದ ಎಳೆಯೇ ಮೊಬೈಲ್. ಒಂದು ಮೊಬೈಲ್  ನಿಂದ ಏನೆಲ್ಲಾ  ತೊಂದರೆಗಳು ಘಟಿಸಬಹುದು ಎನ್ನುವುದನ್ನು ಒಂದು ಫ್ಯಾಮಿಲಿಯೊಳಗಿನ ಘಟನೆಗಳ ಮೂಲಕ ಹೇಳಲಾಗಿದೆ  ಎಂಬುವುದು ಟ್ರೇಲರ್ ನಲ್ಲಿ ಗಮನಿಸಬಹುದು. ಈ ಘಟನೆಗಳು ಭಿನ್ನ ಭಿನ್ನವಾಗಿದ್ದರೂ ಅದು ನಮ್ಮೊಂದಿಗೂ ನಡೆಯಬಹುದು ಎನ್ನುವುದು ‘100’ ಚಿತ್ರದ ಟ್ರೇಲರ್ ನಲ್ಲಿ ಮೇಲ್ನೊಟಕ್ಕೆ ಕಾಣುವ ಅಂಶವಾಗಿದ್ದರೂ, ಚಿತ್ರದಲ್ಲಿರುವ ಸಸ್ಪೆನ್ಸ್, ಥ್ರಿಲ್ಲರ್, ಜೊತೆಗೆ ಪೊಲೀಸ್ ಅಧಿಕಾರಿಯ ಜವಾಬ್ದಾರಿ , ತನ್ನ  ಕುಟುಂಬ ದೊಂದಿಗೆ ಹೊಂದಿರೋ ಭಾವನಾತ್ಮಕ ಸೆಳೆತ, ಎಲ್ಲವೂ ಸೆಳೆಯುವಂತಿವೆ.
ಚಿತ್ರದ ಸಸ್ಪೆನ್ಸ್, ಥ್ರಿಲ್ಲರ್ ಬಿಜಿಎಂ ಹಾಗು ಹಾಡುಗಳ ಸುಂದರ ಸೃಷ್ಟಿ ಹಿಂದೆ ರವಿ ಬಸ್ರೂರು ಅವರ ಕೈಚಳಕವಿದೆ.  ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ಬೇಬಿ ಸ್ಮಯಾ, ರಾಜು ತಾಳಿಕೋಟೆ ಮುಂತಾದ ಕಲಾವಿದರು ಟ್ರೇಲರ್ ನಲ್ಲಿ ಹಾಗೆ ಬಂದು ತಮ್ಮ ಪಾತ್ರದ ಎಳೆಯನ್ನು ಬಿಟ್ಟು ಹೋಗುವುದನ್ನೂ ಗಮನಿಸಬಹುದು.

ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ, ಜಾಲಿ ಬಾಸ್ಟಿನ್ ,ರವಿವರ್ಮ ಅವರ ಸಾಹಸ ನಿರ್ದೇಶನ,  ಧನಂಜಯ್  ನೃತ್ಯ ಸಂಯೋಜನೆ,  ಗುರು ಕಶ್ಯಪ್ ಸಂಭಾಷಣೆ ಇದ್ದು  ಸೂರಜ್‌ ಪ್ರೊಡಕ್ಷನ್‌ನಡಿ ರಮೇಶ್‌ ರೆಡ್ಡಿ  ಬಂಡವಾಳ ಹೂಡುವ ಮೂಲಕ ಸಾಥ್ ನೀಡಿದ್ದಾರೆ.  ಟ್ರೈಲರ್ ನೋಡಿದ ಚಿತ್ರ ರಸಿಕರು ಚಿತ್ರದ ಬಿಡುಗಡೆಯನ್ನೇ ಎದುರು ನೋಡ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *