ಸಿನಿಮಾಗಳಲ್ಲಿನ ಹೇಳಿಕೆ, ತೋರಿಸುವ ವಿಚಾರ ಎಷ್ಟೋ ಸಲ ವಿವಾದಕ್ಕೆ ಈಡಾಗಿರುವ ಉದಾಹರಣೆ ಇದೆ. ಇದೀಗ ರಾಮನ ವಿಚಾರಕ್ಕೆ ‘ಅನ್ನಪೂರ್ಣಿ’ ಸಿನಿಮಾ ವಿವಾದಕ್ಕೆ ಒಳಗಾಗಿದೆ. ಅದರ ಪರಿಣಾಮವೇ ಇದೀಗ ನಟಿ ನಯನತಾರ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅನ್ನಪೂರ್ಣಿ ಸಿನಿಮಾ ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಹಿಂದುಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ ಸೇರಿದಂತೆ ಹಲವು ವಿಚಾರಗಳು ಇದೆ ಎಂದು ದೂರು ನೀಡಲಾಗಿದೆ. ಹಿಂದೂ ಸಂಘಟನೆಯ ಮುಖಂಡ ರಮೇಶ್ ಸೋಲಂಕಿ ದೂರು ನೀಡಿದ್ದಾರೆ.
ಸಿನಿಮಾದ ನಾಯಕಿ ಹಿಜಾಬ್ ಧರಿಸಿ ನಮಾಜ್ ಮಾಡುವುದು. ಆಕೆಯ ಸ್ನೇಹಿತ ನಾಯಕಿಯನ್ನು ಲವ್ ಜಿಹಾದ್‌ಗೆ ಒತ್ತಾಯಿಸಿ ಮತಾಂತರಕ್ಕೆ ಆಮಿಶವೊಡ್ಡುವುದು ಕೂಡ ಸಿನಿಮಾದಲ್ಲಿ ಒಳಗೊಂಡಿದೆ. ಇದರ ಜೊತೆಗೆ ಭಗವಾನ್ ರಾಮ ಮತ್ತು ಆತನ ಪತ್ನಿ ಸೀತಾ ಕೂಡ ಮಾಂಸಾಹಾರಿಗಳೆನ್ನುವ ದೃಶ್ಯಗಳಿವೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕಿ ನಯನತಾರ, ನಿರ್ದೇಶಕ ನಿಲೇಶ್ ಕೃಷ್ಣ, ನಿರ್ಮಾಪಕರಾದ ಆರ್ ರವೀಂದ್ರ,ಜಿತಿನ್ ಸೇಠಿ,ಪುನೀತ್ ಗೋಯಂಕಾ, ಝೀ ಸ್ಟುಡಿಯೋ ಸಿಬಿಒ ಹಾಗೂ ಭಾರತದ ನೆಟ್‌ಫ್ಲಿಕ್ಸ್ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿರುವ ಬಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಮೇಶ್ ಸೋಲಂಕಿ, ಈ ಕುರಿತು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.