ಯೋಗ ಸರ್ವ ರೋಗಗಳಿಗೂ ರಾಮಭಾಣ : ಶ್ರೀನಿವಾಸ್

suddionenews
1 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಆಧುನಿಕ ಜೀವನದಲ್ಲಿ ಎಲ್ಲರೂ ಹಣದ ಹಿಂದೆ ಓಡಿದರೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಯೋಗ, ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆಯಲ್ಲದೆ ರೋಗದಿಂದ ದೂರವಿರಬಹುದು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ಕೋಟೆ ಮುಂಭಾಗವಿರುವ ರಾಘವೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡಿರುವ ಯೋಗಾಸನದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರಮೋದಿರವರು ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಜೂ.21 ನ್ನು ವಿಶ್ವಯೋಗ ದಿನವನ್ನಾಗಿ ಘೋಷಿಸಲಾಗಿದೆ. ಸರ್ವ ರೋಗಗಳಿಗೂ ಯೋಗ ರಾಮಭಾಣವಾಗಿರುವುದರಿಂದ ಎಲ್ಲರೂ ದಿನಕ್ಕೆ ಅರ್ಧ ಗಂಟೆಯಾದರೂ ಯೋಗಕ್ಕೆ ಸಮಯ ಮೀಸಲಿಟ್ಟರೆ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ರಾಮಾಯಣ, ಮಹಾಭಾರತ ಕಾಲದಿಂದಲೂ ಯೋಗವಿದೆ. ಋಷಿಮುನಿಗಳು ಯೋಗಭ್ಯಾಸ ಮಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಎಲ್ಲರೂ ಶ್ರಮಜೀವಿಗಳಾಗಿದ್ದರು. ತಾಂತ್ರಿಕ ಜೀವನಕ್ಕೆ ಈಗ ಮನುಷ್ಯ ಮಾರು ಹೋಗಿರುವುದರಿಂದ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಒಂದು ಕಾಲದಲ್ಲಿ ಮಹಿಳೆಯರು ಕುಟ್ಟುವುದು, ಬೀಸುವುದರಿಂದ ಲವಲವಿಕೆಯಿಂದ ಇರುತ್ತಿದ್ದರು. ಈಗ ಮಿಕ್ಸಿ, ಕುಕ್ಕರ್, ಗ್ರೈಂಡರ್, ವಾಷಿಂಗ್ ಮೆಷಿನ್‍ಗೆ ಅವಲಂಭಿಸಿರುವುದರಿಂದ ಅನೇಕ ವ್ಯಾದಿ ಕಾಡುತ್ತಿದೆ. ಅದಕ್ಕಾಗಿ ಯೋಗ ಮಾಡಿ ರೋಗದಿಂದ ದೂರವಿರಿ ಎಂದು ಮನವಿ ಮಾಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಡಿ.ಡಿ.ಪಿ.ಐ. ನಾಗರಾಜ್ ಮಾತನಾಡುತ್ತ ಒತ್ತಡದ ಬದುಕಿನಲ್ಲಿ ಯೋಗ ಬಹಳ ಮುಖ್ಯವಾದುದು. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಬಹಳ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪ್ರತಿದಿನ ಐದತ್ತು ನಿಮಿಷವಾದರೂ ಯೋಗ ಮಾಡಿದರೆ ದೇಹ ಮತ್ತು ಮನಸ್ಸು ಉಲ್ಲಾಸದಿಂದ ಇರುತ್ತದೆ. ಈಗಿನ ಜೀವನ ಶೈಲಿ ಮತ್ತು ಬಳಸುವ ಆಹಾರ ಪದಾರ್ಥಗಳಿಂದ ಎಲ್ಲರೂ ಒಂದಲ್ಲ ಒಂದು ರೀತಿಯ ನೋವು ಅನುಭವಿಸುವಂತಾಗಿದೆ. ಹಾಗಾಗಿ ಯೋಗಕ್ಕೆ ಹೆಚ್ಚಿನ ಮಹತ್ವ ಕೊಡುವಂತೆ ತಿಳಿಸಿದರು.
ಕೂಬಾನಾಯ್ಕ, ನಿವೃತ್ತ .ಎ.ಎಸ್.ಐ. ಗುರುಮೂರ್ತಿ, ಉಪನ್ಯಾಸಕ ಚನ್ನಬಸಪ್ಪ, ಯೋಗ ಗುರು ಕೆಂಚವೀರಪ್ಪ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *