ಸುದ್ದಿಒನ್, ನವದೆಹಲಿ, ಫೆಬ್ರವರಿ 16: ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಸಂಸತ್ ಚುನಾವಣೆ ನಡೆಯಲಿದೆ. ಮೇಲ್ಮನೆ ಎಂದು ಕರೆಯಲ್ಪಡುವ ರಾಜ್ಯಸಭೆಯ ಸ್ಥಾನಕ್ಕೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ನಾಮಪತ್ರ ಸಲ್ಲಿಸಬೇಕು.
ಈ ದಾಖಲೆಗಳಲ್ಲಿ ಅಭ್ಯರ್ಥಿಯ ಹೆಸರು, ವಿಳಾಸ, ರಾಜಕೀಯ ಪಕ್ಷ ಮತ್ತು ಇತರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ. ಇದರ ಭಾಗವಾಗಿ ಅಭ್ಯರ್ಥಿಗಳ ಆಸ್ತಿ ವಿವರವನ್ನೂ ಬಹಿರಂಗಪಡಿಸಲಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಕೆಲ ನಾಯಕರ ಆಸ್ತಿ ವಿವರ ಈ ಕೆಳಗಿನಂತಿದೆ.
ಸೋನಿಯಾ ಗಾಂಧಿ
ಲೋಕಸಭೆ ಚುನಾವಣೆಯಲ್ಲಿ ಏಳು ಅವಧಿಗೆ ಗೆದ್ದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಬಾರಿ ರಾಜ್ಯಸಭೆಗೆ ಪಾದಾರ್ಪಣೆ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್ ಪ್ರಕಾರ, ಅವರು ಪ್ರಸ್ತುತ ರೂ. 90,000 ನಗದು ಮತ್ತು ಅವರ ಒಟ್ಟು ಆಸ್ತಿ ರೂ. 12,53,76,822 (ರೂ. 12.53 ಕೋಟಿ) ಇದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಫುಲ್ ಪಟೇಲ್
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಜಕಾರಣಿ ಪ್ರಫುಲ್ ಪಟೇಲ್ ಮಹಾರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಇವರು ಘೋಷಿಸಿರುವ ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ರೂ. 450 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.
ಅಶೋಕ್ ಚವಾಣ್
ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ಮಾಜಿ ಕಾಂಗ್ರೆಸ್ ನಿಷ್ಠಾವಂತ ಅಶೋಕ್ ಚವಾಣ್, ಚರ ಮತ್ತು ಸ್ಥಿರಾಸ್ತಿ ಸೇರಿದಂತೆ 68 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಮಿಲಿಂದ್ ದಿಯೋರಾ
ರಾಜ್ಯಸಭಾ ಚುನಾವಣೆಗೆ ಮಾಜಿ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ನಾಮಪತ್ರ ಸಲ್ಲಿಸಿದ್ದಾರೆ. ಅವರ ಆಸ್ತಿ ಅಂದಾಜು 134 ಕೋಟಿ ರೂ ಎಂದು ಮಾಹಿತಿ ನೀಡಿದ್ದಾರೆ.
ಜಯಾ ಬಚ್ಚನ್
ರಾಜ್ಯಸಭೆಗೆ ಐದನೇ ಅವಧಿಗೆ ಸ್ಪರ್ಧಿಸುತ್ತಿರುವ ಜಯಾ ಬಚ್ಚನ್ ಅವರು ತಮ್ಮ ಪತಿ, ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಆಸ್ತಿಯೊಂದಿಗೆ ಒಟ್ಟು 1,578 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈ ಮಾಹಿತಿಯ ಪ್ರಕಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಟ್ಟು ಆಸ್ತಿ 12.53 ಕೋಟಿ ರೂಪಾಯಿ ಇದೆ ಎಂದು ಘೋಷಿಸಿದ್ದು, ಜಯಾ ಬಚ್ಚನ್ ಅವರ ಆಸ್ತಿಗಿಂತಲೂ ಕಡಿಮೆ ಇದೆ.