ಕುರುಗೋಡು: (ಫೆ.20) ; ಹಾಲಿ ಮಾಜಿ ಶಾಸಕರಿದ್ದರೂ ಕಂಪ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ. ಕ್ಷೇತ್ರದಲ್ಲಿ ಜನರ ಅಸಮಾಧಾನ ಮತ್ತು ನಿರ್ಲಕ್ಷ್ಯದಿಂದಾಗಿ ಜನರು ಬದಲಾವಣೆ ಬಯಸಿದ್ದಾರೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿದರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಚಿತ್ರಣವೇ ಬದಲಾಯಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಮತ್ತು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯಕ ಹೇಳಿದರು.
ತಾಲೂಕಿನ ಎಚ್.ವೀರಾಪುರ ಗ್ರಾಪಂಯ ಕೆ.ಸೋಮಲಾಪುರ ಗ್ರಾಮದಲ್ಲಿ ಸೋಮವಾರ ದೇವಸ್ಥಾನಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಬಳಗದಿಂದ ಅದ್ದೂರಿಯಾಗಿ ಸ್ವಾಗತಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಿ, ಕಳೆದ ಹದಿನೈದು ವರ್ಷದಿಂದ ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕಣ್ಮರೆಯಾಗಿವೆ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ನಾನಾ ಸೌಲಭ್ಯಗಳ ಕೊರತೆಯಿದ್ದು, ಬರುವ ದಿನದಲ್ಲಿ ಜನರು ನಮ್ಮನ್ನು ಶಾಸಕರನ್ನಾಗಿ ಮಾಡಿದರೆ, ಮನೆ ಮಗನಂತೆ ದುಡಿಯುವ ಜತೆಗೆ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಲಾಗುವುದು.
ಮುಂದಿನ ದಿನದಲ್ಲಿ ನಮ್ಮ ಸ್ವಂತ ಅನುದಾನದಲ್ಲಿ 15 ಲಕ್ಷದಲ್ಲಿ ಕೆ.ಸೋಮಲಾಪುರದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ನಿರ್ಮಿಸಲಾಗುವುದು. ನಿರುದ್ಯೋಗ ಯುವಕರಿಗೆ ಉದ್ಯೋಗ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹೆಗಲಿಗೆ ಹೆಗಲು ಕೊಟ್ಟವರಿಗೆ, ಹೆಗಲಾಗಿ ದುಡಿಯಲಾಗುವುದು. ಜನರ ಪ್ರೀತಿ, ವಿಶ್ವಾಸದೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕೆಲಸ ಮಾಡಲಾಗುವುದು. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ ಟಿಕೆಟ್ ಸಿಗುವುದು ಖಚಿತ ಮತ್ತು ಶಾಸಕರಾಗುವುದು ಶತಸಿದ್ಧ. ಕ್ಷೇತ್ರಕ್ಕೆ ಬಂದ ಮೇಲೆ ಬಿಟ್ಟು ಹೋಗುವ ಪ್ರಶ್ನೆನೆ ಇಲ್ಲ. ಇಲ್ಲಸಲ್ಲದ ಆರೋಪಗಳಿಗೆ ಜನರು ಕಿವಿಗೊಡಬಾರದು ಎಂದರು.
ನಂತರ ಸೋಮಲಾಪುರದ ಪ್ರಮುಖ ರಸ್ತೆಗಳಲ್ಲಿ ಮಿಂಚಿನ ಸಂಚಾರ ಮಾಡಿ, ದೇವಸ್ಥಾನಗಳಿಗೆ ಭೇಟಿ ಕೊಟ್ಟು ದರ್ಶನ ಪಡೆದರು. ರಾಜು ನಾಯಕ ಅಭಿಮಾನಿಗಳು ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೆಂಬರ್ ಸಿದ್ದಪ್ಪ, ಧನಂಜಯ, ಡಾ.ನಾಗರಾಜ, ಉಡೇದ್ ಬಸವರಾಜ ಸೇರಿದಂತೆ ಅನೇಕರಿದ್ದರು.