ಬೆಳಗಾವಿ: ನಮ್ಮ ರಾಜ್ಯದಲ್ಲಿಯೇ ಕೆಲ ಜಿಲ್ಲೆಗಳ ಪೈಕಿ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಕೂಗು ಮೊದಲಿನಿಂದಲೂ ಕೇಳಿ ಬರ್ತಿದೆ. ಆ ಪೈಕಿ ಉತ್ತರ ಕರ್ನಾಟಕ ಕೂಡ ಒಂದು. ಈಗ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ. ಅದು ತಮ್ಮದೇ ಪಕ್ಷದ ವಿರುದ್ಧ ಕೇಳಿ ಬಂದ ಧ್ವನಿ. ಶಾಸಕ ರಾಜು ಕಾಗೆ ಈ ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಒತ್ತಾಯ ಮಾಡಿರುವ ರಾಜು ಕಾಗೆ ಅವರು, ಅಭಿವೃದ್ಧಿಯಲ್ಲಿ ತಾರತಮ್ಯ ನಿವಾರಿಸಬೇಕು. ಇಲ್ಲವೇ ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯವಾಗಿ ಘೋಷಣೆ ಮಾಡಬೇಕು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬೇಡಿಕೆಯ ವಿಚಾರವನ್ನು ಪ್ರಸ್ತಾಪ ಮಾಡಲಾಗುತ್ತದೆ. ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ. ಈ ಭಾಗದ ಎಲ್ಲಾ ಶಾಸಕರು ನನ್ನ ಜೊತೆಗೆ ಇದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡಕ್ಕೆ ಹೋಲಿಕೆ ಮಾಡಿದರೆ, ಉತ್ತರ ಕರ್ನಾಟಕ ತೀರಾ ಹಿಂದುಳಿದಿದೆ. ದಕ್ಷಿಣ ಭಾಗಕ್ಕೆ ತೋರಿಸುವಂತಹ ವಿಶೇಷ ಕಾಳಜಿ, ಉತ್ತರ ಕರ್ನಾಟಕಕ್ಕೆ ಯಾಕಿಲ್ಲ. ಎಲ್ಲರೂ ಕನ್ನಡ ನಾಡಿನ ಮಕ್ಕಳೇ. ಆದರೂ ಮಲತಾಯಿ ಧೋರಣೆಯನ್ನೇಕೆ ತೋರುತ್ತಾರೆ. ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಸೇರಿ ಒಂದು ರಾಜ್ಯ ಮಾಡಬೇಕು. ಕರ್ನಾಟಕ ಏಕೀಕರಣವಾದಾಗಿನಿಂದ ಈ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ. ಅನ್ಯಾಯವಾಗಿದೆ. ಪ್ರತ್ಯೇಕ ರಾಜ್ಯದ ರಚನೆಯಿಂದ ಮತ್ತೊಂದು ಕನ್ನಡ ನಾಡು ರಚನೆಯಾಗಲಿದೆ ಎಂದಿದ್ದಾರೆ. ರಾಜು ಕಾಗೆ ಅವರು ಈ ಮೊದಲು ಕೂಡ ರಾಜು ಕಾಗೆ ಅವರು ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹ ಮಾಡಿದ್ದರು.



