ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮೇ.23) : ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಭಂದಕ ಕಾಯ್ದೆಯನ್ನು ತಕ್ಷಣವೇ ವಾಪಾಸ್ಸು ಪಡೆಯಲು ಕರ್ನಾಟಕ ರಾಜ್ಯ ಚಿತ್ರದುರ್ಗ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ನಗರದಲ್ಲಿಂದು ಪ್ರತಿಭಟನೆಯನ್ನು ನಡೆಸಿದ ರೈತ ಮುಖಂಡರು, ಕೇಂದ್ರ ಸರ್ಕಾರ ರಾಷ್ಟ್ರದ ರೈತರ ಚಳುವಳಿಗೆ ಮಣಿದು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದ್ದು, ಹಿಂದಿನ ಕರ್ನಾಟಕ ಸರ್ಕಾರ ಸದರಿ ಕಾಯ್ದೆಗಳನ್ನು ಇದುವರೆಗೂ ಹಿಂಪಡೆದಿರುವುದಿಲ್ಲ. ಚುನಾವಣಾ ಮುನ್ನ ತಾವು ಸಹ ನಾವು ಅಧಿಕಾರಕ್ಕೆ ಬಂದ ಮರುಕ್ಷಣವೇ ಸದರಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ನೀಡಿದ್ದೀರಿ. ಈಗ ಕರ್ನಾಟಕದಲ್ಲಿ ತಮ್ಮ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಭಂದಕ ಕಾಯ್ದೆಯನ್ನು ತಕ್ಷಣವೇ ವಾಪಾಸ್ಸು ಪಡೆಯಲು ಒತ್ತಾಯಿಸುತ್ತೇವೆ. 2013ರಲ್ಲಿ ತಮ್ಮ ನೇತೃತ್ವದ ಸರ್ಕಾರ ರೈತ ಚಳುವಳಿಯ ಒತ್ತಾಯಕ್ಕೆ ಮಣಿದು ಕೃಷಿ ಬೆಲೆ ಆಯೋಗ ರಚಿಸಿದ್ದೀರಿ. ಈಗ ಅದಕ್ಕೆ ಶಾಸನ ಬದ್ದ ಬೆಂಬಲ ನೀಡಬೇಕು ಆಯೋಗ ಕಾಲಕಾಲಕ್ಕೆ ನೀಡುವ ವರದಿಯನ್ನು ಗಂಭೀರವಾಗಿ ಪರಿಗಣಿಸಿ ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕು.
ತರಾತುರಿಯಲ್ಲಿ ಹಿಂದಿನ ಸರ್ಕಾರ ತೆಂಗು ಬೆಳೆಗಾರರ ಸಂಕಷ್ಟ ಪರಿಗಣಿಸದೇ ಕೇಂದ್ರ ಸರ್ಕಾರ ನೀತಿ ಅನ್ವಯ ಕ್ವಿಂಟಾಲ್ ಕೊಬ್ಬರಿಗೆ ರೂ. 11750/ ಗಳನ್ನು ಘೋಷಿಸಿದ್ದು, ರಾಜ್ಯ ಸರ್ಕಾರ ತನ್ನ ಕೊಡುಗೆಯಾಗಿ ಏನನ್ನು ನೀಡದೆ ಇರುವುದರಿಂದ ರೈತರು ಮಾರಾಟ ಕೇಂದ್ರಗಳಲ್ಲಿ ಅತಿಯಾದ ನಿಯಮಗಳ ಅಡಿಯಲ್ಲಿ ಮಾರಾಟ ಮಾಡದೇ ಸಂಕಷ್ಟದಲ್ಲಿದ್ದಾರೆ.
ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯ ಸರ್ಕಾರ ವತಿಯಿಂದ ಕನಿಷ್ಠ ರೂ. 3250/-ಗಳನ್ನು ಜೊತೆಗೂಡಿಸಿ ಆದೇಶ ಮಾಡಿದರೆ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಸ್ವಲ್ಪ ಮಟ್ಟಿನ ಅನುಕೂಲ ಒದಗಿಸಿದಂತಾಗುತ್ತದೆ.
ಈಗ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ರೂ. 9000 ಕ್ಕೆ ಕುಸಿದಿರುವುದನ್ನು ಸರ್ಕಾರದ ಗಮನಕ್ಕೆ ತರಲಾಯಿತು. ಕೂಡಲೇ ಈ ಬಗ್ಗೆ ಚರ್ಚಿಸಲು ರೈತ ಮುಖಂಡರ ಸಭೆಯನ್ನು ಕರೆಯಲು ರೈತ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕ್ರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಂ.ಬಿ.ತಿಪ್ಪೇಸ್ವಾಮಿ, ನರಸಿಂಹರಾಜು ಮುದ್ದಾಪುರ, ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ ರೇವಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.