ಸುದ್ದಿಒನ್
ಈಶಾನ್ಯ ರಾಜ್ಯಗಳ ಮೇಲೆ ವರುಣ ತನ್ನ ಪ್ರತಾಪವನ್ನು ತೋರಿಸುತ್ತಿದ್ದಾನೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಭಾರೀ ಪ್ರವಾಹದಿಂದ ಉಂಟಾದ ಭೂಕುಸಿತಗಳಲ್ಲಿ ಸುಮಾರು 30 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ 12 ಜಿಲ್ಲೆಗಳಲ್ಲಿ 60,000 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಕುಟುಂಬಗಳ ಏಳು ಜನರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ ಕೆಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಗುವಾಹಟಿಯಲ್ಲಿ ಕಳೆದ 67 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೇಘಾಲಯದ ತುರಾ ಮತ್ತು ಅಸ್ಸಾಂನ ಗುವಾಹಟಿ ನಡುವಿನ ರಾಷ್ಟ್ರೀಯ ಹೆದ್ದಾರಿ 17 (NH-17) ಹಾನಿಗೊಳಗಾಗಿದ್ದು, ರಸ್ತೆ ಸಾರಿಗೆ ಅಸ್ತವ್ಯಸ್ತವಾಗಿದೆ. ಗುವಾಹಟಿಯಲ್ಲಿ ಒಂದೇ ದಿನದಲ್ಲಿ 111 ಮಿಮೀ ಮಳೆಯಾಗುವ ಮೂಲಕ 67 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಬ್ರಹ್ಮಪುತ್ರ ಸೇರಿದಂತೆ ಈಶಾನ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬೊಕೊ ಮತ್ತು ಚೈಗಾಂವ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-17 ರ ಪ್ರಮುಖ ವಿಭಾಗಗಳು ಕೊಚ್ಚಿಹೋಗಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ ಮತ್ತು ಮಿಜೋರಾಂಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ. ಅಸ್ಸಾಂನಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಅಸ್ಸಾಂನ ಕೆಲವು ಭಾಗಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ನೀಡಿದೆ. ಇತರ ಕೆಲವು ಈಶಾನ್ಯ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಕಾರು ರಸ್ತೆಯಿಂದ ಉರುಳಿಬಿದ್ದ ಪರಿಣಾಮ ಎರಡು ಕುಟುಂಬಗಳ ಏಳು ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅಸ್ಸಾಂನಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭೂಕುಸಿತಗಳಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಆರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದು ಹತ್ತು ಸಾವಿರಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತು. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಪ್ರಕಾರ, ಕಾಮರೂಪ ಮಹಾನಗರ ಜಿಲ್ಲೆಯಿಂದ ಐದು ಸಾವುಗಳು ವರದಿಯಾಗಿವೆ. ಬೋಂಡಾ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಜಯಂತ್ ಮಲ್ಲಾ ಬರುವಾ ಶುಕ್ರವಾರ ತಿಳಿಸಿದ್ದಾರೆ.






