ಬೆಂಗಳೂರು: ಈಚೆಗಷ್ಟೇ ಮಳೆಯ ಅಬ್ಬರ ರಾಜ್ಯದಲ್ಲಿ ತಗ್ಗಿದೆ. ಒಂದೇ ಸಮನೆ ಸುರಿದು ಕೊಂಚ ವಿಶ್ರಾಂತಿ ಪಡೆದುಕೊಂಡಿರುವ ವರುಣರಾಯ, ಮತ್ತೆ ದರ್ಶನ ಭಾಗ್ಯ ನೀಡಲು ಸಜ್ಜಾಗಿದ್ದಾನೆ. ನವೆಂಬರ್ 16ರವರೆಗೂ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಬಾರೀ ಮಳೆಯಾದರೆ ಇನ್ನು ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಹವಮಾನ ಇಲಾಖೆ ಹಳದಿ ಅಲರ್ಟ್ ಅನ್ನು ನೀಡಿದೆ.
ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ. ಕನಿಷ್ಠ 70-110 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹಾಗೇ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ, ಬೀದರ್, ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು, ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಇನ್ನು ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಭಾಗದಲ್ಲಿ ಲಘು ಮಳೆಯಾಗಲಿದೆ. ಈಗಾಗಲೇ ಈ ಭಾಗಗಳಲ್ಲಿ ಚಳಿಯ ವಾತಾವರಣ ಜೋರಾಗಿದೆ. ಜೊತೆಗೆ ಬೆಳೆ ಕೊಯ್ಲಿನ ಕಡೆಗೆ ಈ ಭಾಗದ ರೈತರು ಗಮನ ಕೊಟ್ಟಿದ್ದಾರೆ. ಹಿಂಗಾರು ಮಳೆ ಬಿಡುವು ಕೊಟ್ಟಿರುವ ಕಾರಣ ಹೆಸರು, ಮೆಕ್ಕೆಜೋಳ, ಬೆಂಡೆ ಸೇರಿದಂತೆ ಹಲವು ಬೆಳೆಗಳ ಕೊಯ್ಲು ಮಾಡುತ್ತಿದ್ದಾರೆ. ಹೀಗಿರುವಾಗ ಮತ್ತೆ ಮಳೆ ಬಂದರೆ ಕೊಯ್ಲಿಗೆ ಬಂದ ಬೆಳೆಯೆಲ್ಲಾ ಹಾಳಾಗುವ ಭಯ ರೈತರದ್ದು.