ಮುಂಗಾರು ಮತ್ತು ಹಿಂಗಾರಿನ ಮಳೆಯ ಹೆಚ್ಚಳದಿಂದಾಗಿ ರಾಜ್ಯಾದ್ಯಂತ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ವರ್ಷಾನುಗಟ್ಟಲೆ ಬತ್ತಿ ಹೋಗಿದ್ದ ಕೆರೆಗಳೆಲ್ಲಾ ಕೋಡಿ ಬಿದ್ದಿವೆ. ಈ ಹಿನ್ನೆಲೆ ಕಲೆದ ವರ್ಷಕ್ಕಿಂತ ಈ ವರ್ಷ ಚಳಿ ಹೆಚ್ಚಾಗಿದೆ. ಇದರ ನಡುವೆ ಮಳೆ ಕೂಡ ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತಿದೆ.

ಇಂದು ಬೆಳಗ್ಗೆಯಿಂದಾನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಹಿಡಿದುಕೊಂಡಿದೆ. ಬೆಳಗ್ಗೆ ಚಳಿಯಿಂದ ಮೈಕೊಡವಿ ಎದ್ದವರಿಗೆ ಮೋಡ ಕವಿದ ವಾತಾವರಣದ ದರ್ಶನವಾಗಿದೆ. ಗೊಣಕಿಕೊಂಡೆ ಚಳಿಯ ನಡುವೆ ಕೆಲಸಕ್ಕೆ ಮುನ್ನಡೆದಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ರಾಜ್ಯದಲ್ಲಿ ಮಳೆರಾಯನ ಸ್ಪರ್ಶವಾಗಿದೆ. ಇನ್ನು ಎರಡು ದಿನ ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ವಿಜಯಪುರ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.

