ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನು ಐದು ದಿನಗಳ ಕಾಲ ಮಳೆ ಇದೇ ರೀತಿ ಅಬ್ಬರಿಸಲಿದ್ದಾನೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ಕರ್ನಾಟದ ಹಲವೆಡೆ ಇನ್ನು ಐದು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ಬಸ್ ನಿಲ್ದಾಣ ಕೆರೆಯಂತಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಈ ವರ್ಷವೇ ನಾಲ್ಕೈದು ಬಾರಿ ಬಸ್ ಡಿಪೋ ಜಲಾವೃತವಾಗಿದೆ ಎನ್ನಲಾಗಿದೆ. ಮಂಡ್ಯದ ಕೆ ಆರ್ ಪೇಟೆ ಬಸ್ ನಿಲ್ದಾಣವೂ ಜಲಾವೃತಗೊಂಡಿದೆ. ಇದಕ್ಕೆಲ್ಲಾ ಕೆರೆಗಳನ್ನು ಮುಚ್ಚಿ ಬಸ್ ನಿಲ್ದಾಣ ಮಾಡಿರುವುದೇ ಕಾರಣ ಎನ್ನಲಾಗಿದೆ.