ಬೆಂಗಳೂರು: ಚಳಿಗಾಲದಲ್ಲಿ ಮಳೆಗಾಲವೂ ಶುರುವಾಗಿದೆ. ಮೊದಲೇ ಚುಮು ಚುಮು ಚಳಿಯಲ್ಲಿ ಇದ್ದ ಜನಕ್ಕೆ ತುಂತುರು ಮಳೆ ಮತ್ತಷ್ಟು ಚಳಿಯನ್ನು ತಂದಿದೆ. ಇದರ ಜೊತೆಗೆ ರಾಗಿ ಸೇರಿದಂತೆ ಇತರ ಬೆಳೆ ಬೆಳೆದಿದ್ದ ರೈತರು ಬೆಳೆ ಕಟಾವು ಮಾಡುವುದಕ್ಕೆ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು 16 ದಿನಗಳ ಕಾಲ ಮಳೆ ಸುರಿಯಲಿದೆ ಎಂಬುದನ್ನ ಹವಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಂದ್ರೆ ಡಿಸೆಂಬರ್ 28ರವರೆಗೂ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಮೇಲೂ ಪರಿಣಾಮ ಬೀರಿದೆ, ಮತ್ತೆ ಜಿಟಿಜಿಟಿ ಮಳೆ ಶುರುವಾಗಿದೆ. ರಾಜ್ಯ ರಾಜಧಾನಿಯಲ್ಲಂತು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ಸೋನೆ ಮಳೆ ಸುರಿಯುತ್ತಲೆ ಇದೆ. ಇಂದು ರಾತ್ರಿ ವೇಳೆಗೆ ಜೋರು ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಇಂದಿನಿಂದ ಡಿಸೆಂಬರ್ 20ರವರೆಗೂ ಶಿವಮೊಗ್ಗ, ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕ್ಙಡ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆದರೆ ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಧಾರಾವಾಡ ಜಿಲ್ಲೆಗಳಲ್ಲೂ ಕೊಂಚ ಮಳೆಯಾಗಲಿದೆ. ಆದರೆ ಈ ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಮಳೆಯಾಗುವ ಯಾವುದೇ ಮುನ್ಸೂಚನೆ ನೀಡಿಲ್ಲ. ಈ ಬಾರಿ ಮುಂಗಾರು ಜೋರು ಹಿಂಗಾರು ಜೋರು. ಈಗ ಚಳಿಗಾಲದಲ್ಲೂ ಮಳೆ ನಿಲ್ತಿಲ್ಲ. ವಾಡಿಕೆಗಿಂತ ಈ ವರ್ಷ ಹೆಚ್ಚಿನ ಚಳಿ ಇರಲಿದೆ ಎನ್ನಲಾಗಿದೆ. ಹೀಗಿರುವಾಗ ಪದೇ ಪದೇ ಈ ರೀತಿ ಮಳೆಯಾದರೆ ಚಳಿಯ ಪ್ರಮಾಣವೂ ಹೆಚ್ಚಾಗಲಿದೆ.