ಮಳೆಗಾಲ ಬಂತು ಅಂದ್ರೆ ಪ್ರಕೃತಿಯನ್ನ ನೋಡುವುದೇ ಚೆಂದ. ಎಲ್ಲಾ ಕಡೆ ಹಸಿರು ತುಂಬಿರುತ್ತೆ, ಮೋಡಗಳು ಭೂಮಿಗೆ ತಾಗಿರುವಂತೆ ಫೀಲ್ ಆಗುತ್ತೆ, ಅಚ್ಚ ಹಸಿರಿನ ಎಲೆಗಳ ಮೇಲೆ ನೀರಿನ ಹನಿ ಹಾಗೆ ಇರುತ್ತದೆ. ಒಂದ ಎರಡಾ ಪ್ರಕೃತಿ ಸೌಂದರ್ಯ ಕಾಣುವ ರೀತಿ. ಅದರಲ್ಲೂ ಪ್ರವಾಸಿ ಪ್ರಿಯರಿಗೆ ಈ ವಾತಾವರಣ ಹೇಳಿ ಮಾಡಿಸಿದಂತೆ ಇರುತ್ತದೆ. ಮಳೆಗಾಲ ಎಂದಾಕ್ಷಣಾ ಅವರಿಗೆಲ್ಲ ನೆನಪಾಗುವುದೇ ಪ್ರವಾಸಿ ತಾಣಗಳು. ಅದರಲ್ಲೂ ಚಿಕ್ಕಮಗಳೂರು ಎಂದರೆ ಹೊರಟು ಬಿಡುವವರೇ ಜಾಸ್ತಿ.
ಆದರೆ ಈ ಮಳೆಯಲ್ಲಿ ಕೆಲವೊಂದು ಸ್ಥಳಗಳಿಗೆ ಹೋಗುವುದು ಅಪಾಯಕಾರಿ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಇನ್ನು ಒಂದು ವಾರಗಳ ಕಾಲ ಮಳೆ ಮುಂದುವರೆಯುತ್ತದೆ ಎಂದೇ ಹವಮಾನ ಇಲಾಖೆ ಸೂಚನೆ ನೀಡಿದೆ. ಇದೀಗ ಚಿಕ್ಕಮಗಳೂರಿನ ಹಲವು ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರಿನ ಬಲ್ಲಾಳ ರಾಯನ ದುರ್ಗ, ರಾಣಿಝರಿ, ಬಂಡಾಜೆ ಫಾಲ್ಸ್ ಟ್ರಕ್ಕಿಂಗ್‌ಗೆ ನಿರ್ಬಂಧ ಹಾಕಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರವಾಸಿಗರು ಚಾರಣದ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಪ್ರವಾಸಿ ತಾಣ, ಕಳಸ ತಾಲೂಕಿನ ಬಂಡಾಜೆ ಫಾಲ್ಸ್‌ಗೆ ಕೊಪ್ಪ ವಿಭಾಗದ ಅರಣ್ಯ ಇಲಾಖೆ ಈ ಕ್ರಮಕೈಗೊಂಡಿದೆ. ಮುಂದಿನ 24 ಗಂಟೆಯಲ್ಲಿ ಬಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಓಡಾಡುವ ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಾಹನ ಸವಾರರು, ಕೆಲಸ ಕಾರ್ಯಗಳಿಗೆ ಹೋಗುವವರು ಮುಂಜಾಗ್ರತ ಕ್ರಮ ಕೈಗೊಳಗಳಬೇಕಾಗಿದೆ.