ಸುದ್ದಿಒನ್
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ 2 ರನ್‌ಗಳಿಂದ ಗೆದ್ದುಕೊಂಡಿದೆ. ಮೂರು ಟಿ20 ಪಂದ್ಯಗಳ ಸರಣಿಯ ಅಂಗವಾಗಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. 140 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ 6.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಆ ಬಳಿಕ ಪಂದ್ಯ ಮುಂದುವರಿಸುವ ಸ್ಥಿತಿ ಇಲ್ಲದ ಕಾರಣ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 2 ರನ್‌ಗಳ ಜಯ ಸಾಧಿಸಿದೆ ಎಂದು ಪ್ರಕಟಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿತು. ಆರಂಭದಿಂದಲೂ ಒಂದರ ಮೇಲೊಂದು ವಿಕೆಟ್ ಕಳೆದುಕೊಂಡಿತು. 6.3 ಓವರ್ ಗಳಲ್ಲಿ 5 ವಿಕೆಟ್ (31 ರನ್) ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೊನೆಯಲ್ಲಿ ಬ್ಯಾರಿ ಮೆಕಾರ್ಥಿ (51 ರನ್, 33 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಕರ್ಟಿಸ್ ಕಾಂಫರ್ (39 ರನ್, 33 ಎಸೆತ, 3 ಬೌಂಡರಿ, 1 ಸಿಕ್ಸರ್) ಅಬ್ಬರದ ಬ್ಯಾಟಿಗ್ ನಿಂದಾಗಿ ಐರ್ಲೆಂಡ್ 139 ಸ್ಕೋರ್ ದಾಖಲಿಸಿತು. ಈ ಇಬ್ಬರ ಜೊತೆಯಾಟದಿಂದ 90 ರನ್ ಗಳಿಸಿದರು. ತಂಡದ ಉಳಿದವರು ಒಟ್ಟಾಗಿ ಗಳಿಸಿದ್ದು 42 ರನ್ ಮಾತ್ರ ಎಂಬುದು ಗಮನಾರ್ಹ
ಗುರಿ ತಲುಪುವ ನಿಟ್ಟಿನಲ್ಲಿ ಭಾರತದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ (24) ಮತ್ತು ರುತುರಾಜ್ ಗಾಯಕ್ವಾಡ್ (ಅಜೇಯ 19) ಉತ್ತಮ ಆರಂಭ ನೀಡಿದರು. ಇಬ್ಬರೂ ಆಕ್ರಮಣಕಾರಿ ಆಟವಾಡಿದ್ದರಿಂದ ಪವರ್ ಪ್ಲೇ ಅಂತ್ಯಕ್ಕೆ ಭಾರತ 45/0 ರನ್ ಗಳಿಸಿದರು.
ಕ್ರೇಗ್ ಯಂಗ್ ಎಸೆದ ಏಳನೇ ಓವರ್‌ನಲ್ಲಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ (0) ಕ್ರಮವಾಗಿ ಔಟಾದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಮಳೆ ಸುರಿಯಲಾರಂಭಿಸಿ ಆಟ ಸ್ಥಗಿತಗೊಂಡಿತು. ಬಳಿಕ ಮಳೆ ಕಡಿಮೆಯಾಗದ ಕಾರಣ ಡಕ್‌ವರ್ತ್ ಲೂಯಿಸ್ ಪ್ರಕಾರ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸುದೀರ್ಘ ವಿರಾಮದ ನಂತರ ಫಾರ್ಮ್ ಗೆ ಮರಳಿದರು ಮತ್ತು ತೀಕ್ಷ್ಣವಾದ ಎಸೆತಗಳಿಂದ ಐರ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿ
2 ವಿಕೆಟ್ ಪಡೆದರು. ಪ್ರಸಿದ್ಧ್ 2, ರವಿ ಬಿಷ್ಣೋಯ್ 2, ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರು.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ, 11 ತಿಂಗಳ ನಂತರ ಟೀಂ ಇಂಡಿಯಾಗೆ ಮರಳಿರುವ ಜಸ್ಪ್ರೀತ್ ಬುಮ್ರಾ ಅವರು ನಾಯಕತ್ವದ ಮೊದಲ ಪಂದ್ಯದಲ್ಲೇ ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಟಿ20 ಭಾನುವಾರ ನಡೆಯಲಿದೆ.